ADVERTISEMENT

‘ಜೆಡಿಎಸ್‌ಗೆ ಬಹುಮತ ನಿಶ್ಚಿತ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 8:43 IST
Last Updated 27 ನವೆಂಬರ್ 2017, 8:43 IST

ನಾಪೋಕ್ಲು: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಹುಮತ ಪಡೆಯುವುದರ ಮೂಲಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೀವಿಜಯ ಅಭಿಪ್ರಾಯಪಟ್ಟರು. ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಹೊದವಾಡ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಧಾರ್ಮಿಕ ಭಾವನೆಯನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿವೆ. ಇಂದು ಜನರು ವಿಚಾರವಂತರಾಗಿದ್ದಾರೆ. ಪೊಳ್ಳು ಭರವಸೆಯನ್ನು ನಂಬುವವರಲ್ಲ ಎನ್ನುವುದಕ್ಕೆ ಮುಂದಿನ ವಿಧಾನ ಸಭಾ ಚುನಾವಣೆ ಸಾಕ್ಷಿಯಾಗಲಿದೆ ಎಂದರು.

ADVERTISEMENT

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಪ ಅಂಖ್ಯಾತರಿಗೆ ಸೌಲಭ್ಯ ಒದಗಿಸುವುದನ್ನು ಎರಡನೆಯ ದರ್ಜೆ ನಾಗರಿಕರಂತೆ ಕಾಣಲಾಗುತ್ತದೆ ಎಂದು ದೂರಿದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ನಿಶ್ಚಿತ. ಮತದಾರರು ಮತ ವಿಭಜನೆ ಯಾಗದಂತೆ ಎಚ್ಚರವಹಿಸಬೇಕು ಎಂದರು.

ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ಮತೀನ್, ಮೂರ್ನಾಡು ವಿಭಾಗದ ಜೆಡಿಎಸ್ ಉಪಾಧ್ಯಕ್ಷ ಜಾಸೀರ್, ಹಿರಿಯ ಮುಖಂಡ ಕಲಿಯಂಡ ಸಿ. ನಾಣಯ್ಯ, ರಷೀದ್, ಯಯಾಜ್ ನಾಹಿಮ್, ಸುಲೈಮಾನ್, ಮಹಮ್ಮದ್, ಎಂ.ಎಸ್. ಇಬ್ರಾಹಿಂ, ಗಫೂರ್, ಸಾದಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.