ADVERTISEMENT

ಜೋಡುಬೀಟಿ: ನೀರಿಗೂ ತತ್ವಾರ

ಗ್ರಾಮ ಸಂಚಾರ

ಡಾ.ಜೆ.ಸೋಮಣ್ಣ
Published 26 ಫೆಬ್ರುವರಿ 2014, 9:47 IST
Last Updated 26 ಫೆಬ್ರುವರಿ 2014, 9:47 IST

ಗೋಣಿಕೊಪ್ಪಲು: ಕುಡಿಯುವ ನೀರು, ರಸ್ತೆ, ವಿದ್ಯುತ್ ಜನತೆಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯಗಳು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜೋಡುಬೀಟಿ ಗ್ರಾಮದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರಾಮ ಜನತೆ ನಿತ್ಯವೂ ಕುಡಿಯುವ ನೀರನ್ನು ಹುಡುಕಿಕೊಂಡು ತೆರೆದ ಬಾವಿಯತ್ತ ಸುತ್ತಾಡುವುದೇ ಆಗಿದೆ.

ಗ್ರಾಮದಲ್ಲಿ ಸುಮಾರು 600 ಜನಸಂಖ್ಯೆ ಇದೆ. ಇವರಲ್ಲಿ ಶೇ 95ರಷ್ಟು  ಮಂದಿ ಕೆಂಬಟ್ಟಿ ಜನಾಂಗದವರು. ಇವರಿಗೆ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕಿರು ನೀರು ಯೋಜನೆಯಲ್ಲಿ ಟ್ಯಾಂಕ್‌ಗಳನ್ನು  ನಿರ್ಮಿಸಿಕೊಡಲಾಗಿದೆ. ಆದರೆ ಯಾವುದೇ ಟ್ಯಾಂಕ್‌ಗಳಲ್ಲಿ ನೀರಿಲ್ಲ. ಎಲ್ಲ ಟ್ಯಾಂಕ್‌ಗಳ ಮುಂದೆ ನಲ್ಲಿಗಳಿವೆ. ಆದರೆ ನೀರಿಲ್ಲದೆ ಅವೆಲ್ಲ ತುಕ್ಕು ಹಿಡಿದು ಮುರಿದು ಬಿದ್ದಿವೆ.

ಆಗಾಗ ನೀರು ಬರದೆ ಪೈಪ್‌ಗಳು ಕೂಡ ಮುರಿದು ಹೋಗಿವೆ. ತೆರೆದ ಚರಂಡಿಯಲ್ಲಿ ಫೈಬರ್ ಪೈಪ್‌ಗಳನ್ನು  ಹಾಕಿರುವುದರಿಂದ ಕೆಲವರು ಕಲ್ಲು ಎತ್ತುಹಾಕಿ ಒಡೆದು ಹಾಕಿದ್ದಾರೆ. ಹೀಗಾಗಿ 600 ಜನಸಂಖ್ಯೆ ಹೊಂದಿರುವ ಗ್ರಾಮದ ಜನತೆಗೆ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ಮೂರು ತೆರೆದ ಬಾವಿಗಳಿವೆ. ಈಗ ಈ ಬಾವಿಗಳೇ ಕುಡಿಯುವ ನೀರಿಗೆ ಆಸರೆ. ಜತೆಗೆ  ಕೊಳವೆ ಬಾವಿಗಳು ಕೂಡ ಇವೆ. ಆದರೆ ನೀರಿರುವುದು ಕೇವಲ ಒಂದೆರಡರಲ್ಲಿ ಮಾತ್ರ. ತೆರೆದ ಬಾವಿಗಳು ಕೂಡ ಮಾರ್ಚ್‌ ಏಪ್ರಿಲ್‌ನಲ್ಲಿ ಒಣಗಿ ಹೋಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ನೀರಿನ ಸಮಸ್ಯೆ ಹೇಳಲು ಸಾಧ್ಯ.

ಮಾಜಿ ಸಚಿವೆ ಸುಮಾ ವಂಸತ್ ಹಾಗೂ ಅಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಶಾಜಿ ಅಚ್ಯುತನ್ ಅವರು 2004ರಲ್ಲಿ ಕಿರುನೀರು ಯೋಜನೆಯಲ್ಲಿ ಟ್ಯಾಂಕ್ ಒಂದನ್ನು ನಿರ್ಮಿಸಿಕೊಟ್ಟಿದ್ದರು. ಆದರೆ ಈ  ಟ್ಯಾಂಕ್ ನಿಷ್ಪ್ರಯೋಜಕವಾಗಿದೆ, ಕೂಲಿಕಾರ್ಮಿಕ ಬಡಜನರೇ ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮದಲ್ಲಿ ಸಂಜೆ ಕೆಲಸ ಮುಗಿಸಿ ಬಂದ ಮಹಿಳೆಯರು ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವ ಸ್ಥಿತಿ ಸಾಮಾನ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.