ADVERTISEMENT

ತಾಪಮಾನ: ಗಮನಸೆಳೆದ ವಿದ್ಯಾರ್ಥಿಗಳ ರೂಪಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:20 IST
Last Updated 24 ಫೆಬ್ರುವರಿ 2012, 10:20 IST

ಕುಶಾಲನಗರ: ಕುಶಾಲನಗರ ರೋಟರಿ ಕ್ಲಬ್ ಆಶ್ರಯದಲ್ಲಿ ಫಾತಿಮ ಪ್ರೌಢಶಾಲೆಯ ಇಂಟರ‌್ಯಾಕ್ಟ್ ಕ್ಲಬ್ ವತಿಯಿಂದ ಗುರುವಾರ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಜಾಗತಿಕ ತಾಪಮಾನ ಮತ್ತು ಜೀವನದಿ ಕಾವೇರಿ ಕಲುಷಿತಗೊಳ್ಳುತ್ತಿರುವುದರ ಬಗ್ಗೆ ಪರಿಸರ ಸಂರಕ್ಷಣೆ ಕುರಿತ ರೂಪಕ ಪ್ರದರ್ಶಿಸಲಾಯಿತು.

ಇಂಟರ‌್ಯಾಕ್ಟ್ ಕ್ಲಬ್ ಸಂಯೋಜಕ ಶಿಕ್ಷಕ ಅಂತೋಣಿ ಪ್ರಭುರಾಜ್ ನಿರ್ದೇಶನದಲ್ಲಿ ರೂಪುಗೊಂಡ ರೂಪಕದಲ್ಲಿ ವಿದ್ಯಾರ್ಥಿಗಳು ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ಹಾಗೂ ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿತು.

ಜಾಗತಿಕ ತಾಪಮಾನ ಹೆಚ್ಚಳದಿಂದ ಭವಿಷ್ಯದಲ್ಲಿ ಎದುರಿಸಬಹುದಾದ ಗಂಡಾಂತರ ಮತ್ತು ಇದನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳು ವಹಿಸಬೇಕಾದ ಮುಂಜಾಗ್ರತೆ ಕುರಿತು ವಿದ್ಯಾರ್ಥಿಗಳು ರೂಪಕದ ಮೂಲಕ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.

ಮರಳು ಗಣಿಗಾರಿಕೆ, ಅಂತರ್ಜಲ ಕುಸಿಯುತ್ತಿ ರುವುದು ಮತ್ತು ನದಿಗೆ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುತ್ತಿರುವುದರಿಂದ ಜೀವನದಿ ಕಾವೇರಿ ಕಲುಷಿತಗೊಳ್ಳುತ್ತಿರುವುದರ ಬಗ್ಗೆ ವಿದ್ಯಾರ್ಥಿಗಳು ದೃಷ್ಟಾಂತಗಳನ್ನು ಪ್ರದರ್ಶಿಸುವ ಮೂಲಕ ಜನರು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಬೆಳೆಸಿಕೊಳ್ಳುವ ಕುರಿತಂತೆ ಅಭಿನಯಿಸಿದರು.

ರೋಟರಿ ಕ್ಲಬ್‌ನ ಸಮುದಾಯ ಯೋಜನಾಧಿಕಾರಿ ಎ.ಎ.ಚಂಗಪ್ಪ ಮಾತನಾಡಿ, ಪ್ರತಿಯೊಬ್ಬರೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದರು.

ಸಂಯೋಜಕ ಪ್ರಭುರಾಜ್ ಮಾತನಾಡಿ, ನೀರನ್ನು ಪ್ರತಿಯೊಬ್ಬರೂ ಮಿತವಾಗಿ ಬಳಸುವುದ ರೊಂದಿಗೆ ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದರು.

ಇಂಟರ‌್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಜವಾರ್, ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಡಾ. ಎಸ್.ಪಿ.ಧರಣೇಂದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾವೇರಿ ನದಿ ನೀರನ್ನು ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಅದಕ್ಕೆ ಎಳನೀರು, ವೀಳ್ಯದೆಲೆಯನ್ನು ಹಾಕುವ ಮೂಲಕ ರೋಟರಿ ಸಂಸ್ಥೆ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಮಾರ್ಷಲ್ ಲೋಬೋ, ರೋಟರಿ ಸಂಸ್ಥೆಯ ಪ್ರಮುಖರಾದ ಎಸ್.ಕೆ.ಸತೀಶ್, ಆರ್.ಎಸ್.ಕಾಶೀಪತಿ, ಕ್ರೆಜ್ವಲ್ ಕೋಟ್ಸ್, ಹರೀಶ್ ಎ.ಶೆಟ್ಟಿ, ನರೇಂದ್ರ,   ಮಹೇಶ್, ಶಾಜಿ, ಸತೀಶ್, ಪ್ರಕಾಶ್, ಇಂಟರ‌್ಯಾಕ್ಟ್ ಕ್ಲಬ್‌ನ ಶಾಲಾ ಘಟಕದ ಅಧ್ಯಕ್ಷ ಅನಿಶ್, ಪದಾಧಿಕಾರಿಗಳಾದ ರೇವತಿ, ಸಿಸಿಲಿ, ಶಮಂತ್ ಇತರರು ಇದ್ದರು. ಶಿಕ್ಷಕ ಚಾರ್ಲ್ಸ್ ಡಿ~ಸೋಜ ಸ್ವಾಗತಿಸಿದರು. ಶಿಕ್ಷಕಿ ಸವರಿನ್ ಡಿ~ಸೋಜ ನಿರ್ವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.