ADVERTISEMENT

ದಾಖಲೆ ತಿದ್ದಿದ ಅಧಿಕಾರಿಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:12 IST
Last Updated 18 ಡಿಸೆಂಬರ್ 2013, 5:12 IST

ಸೋಮವಾರಪೇಟೆ: ಗ್ರಾಮ ಪಂಚಾಯಿತಿ ಜಾಗವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ದಾಖಲೆ ತಿದ್ದುಪಡಿ ಮಾಡಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದ ಪಟ್ಟಣ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷೆ ಲೀಲಾ ನಿರ್ವಾಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂತು.

ಸದಸ್ಯರಾದ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ ಹಾಗೂ  ಕೆ.ಎ. ಆದಂ ಮಾತನಾಡಿ ಚೌಡ್ಲು ಗ್ರಾಮ ಪಂಚಾಯಿತಿಯ ಆಂಜನೇಯ ದೇವಾಲಯದ ಬಳಿ ಇರುವ 47 ಸೆಂಟ್ ಜಾಗ ಪಟ್ಟಣ ಪಂಚಾಯಿತಿ ಜಾಗ ಎಂದು ಹಾಗೂ ನಗರದ ಖಾಸಗಿ ಬಸ್ ನಿಲ್ದಾಣ ಬಳಿ 1 ಸೆಂಟ್ ಜಾಗವನ್ನು 9.5 ಸೆಂಟ್ ಎಂದು ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ದಾಖಲೆಯನ್ನು ಪುನರ್ ಪರಿಶೀಲಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ತಪ್ಪು ಎಂದು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನೀಡಿರುವ ದಾಖಲೆಗಳನ್ನು ತಡೆ ಹಿಡಿಯುವಂತೆ ಸೂಚಿಸಿದರು.
ದಾಖಲೆ ತಿರುಚಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪಟ್ಟಣ ಪಂಚಾಯಿತಿ ಅಭಿವೃದ್ಧಿಯಲ್ಲಿ ಯಾರೂ ರಾಜಕೀಯ ಮಾಡಬಾರದು. ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.

ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳಿಂದ ₨ 1 ಕೋಟಿಗೂ ಹೆಚ್ಚಿನ ಬಾಡಿಗೆ ಬಾಕಿ ಇದ್ದು, ಹೆಚ್ಚಿನವರು ಅಂಗಡಿಯ ಠೇವಣಿಯನ್ನೂ ನೀಡಿಲ್ಲ ಎಂದು ಸದಸ್ಯ ಕೆ.ಎ. ಆದಂ ಹಾಗೂ ವಿಜಯಲಕ್ಷ್ಮಿ ಸುರೇಶ್‌ ಆರೋಪಿಸಿದರು.

ಅಂಗಡಿ ಪಡೆದವರನ್ನು ಬಿಟ್ಟು ಬೇರೊಬ್ಬರ ಹೆಸರಿನಲ್ಲಿ ಪರವಾನಗಿಯನ್ನು ನೀಡಲಾಗಿದೆ. ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆ ಜನವರಿ 2012ರಲ್ಲಿ ಉದ್ಘಾಟನೆಯಾದರೂ ಇಲ್ಲಿಯವರೆಗೆ ಅದನ್ನು ಟೆಂಡರ್ ಕರೆದು ವಿಲೇವಾರಿ ಮಾಡಿಲ್ಲ. ಇದರಿಂದ ಪಟ್ಟಣ ಪಂಚಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದರು.

ಬಾಡಿಗೆ ಬಾಕಿ ಇಟ್ಟುಕೊಂಡಿರುವ ವರ್ತಕರಿಗೆ ಕೂಡಲೇ ನೋಟಿಸ್‌ ನೀಡಿ ಅಂಗಡಿಗೆ ಬೀಗ ಹಾಕುವಂತೆ, ಅವಧಿ ಮೀರಿದ ಮಳಿಗೆಗಳ ಮರು ಟೆಂಡರ್ ಕರೆಯುವಂತೆ ಶಾಸಕರು ಸೂಚಿಸಿದರು. ಅಲ್ಲದೇ, ಬಾಕಿ ಇರುವ ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವಂತೆ ಸೂಚಿಸಿದರು.

13ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ಯೋಜನೆಯ ಅನುದಾನದಲ್ಲಿ ನಗರದ 11 ವಾರ್ಡ್‌ಗಳಲ್ಲಿ ಚರಂಡಿ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ, ಕಾಂಪೌಂಡ್ ನಿರ್ಮಾಣ, ತಡೆಗೋಡೆ ಸೇರಿದಂತೆ ಒಟ್ಟು 25 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ರಂಜನ್ ಸಭೆಗೆ ತಿಳಿಸಿದರು. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಅದರ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ಕೊಡುತ್ತಿಲ್ಲ ಎಂದು ಸದಸ್ಯೆ ವಿಜಯಲಕ್ಷ್ಮಿ ಸುರೇಶ್ ದೂರಿದರು. ಪ್ರತಿ ವಾರ್ಡ್‌ನಲ್ಲಿ ನಡೆಯುವ ಕಾಮಗಾರಿಗಳ ವಿವರ ಹಾಗೂ ಬಿಡುಗಡೆಯಾದ ಹಣದ ವಿವರಗಳನ್ನು ನಾಮಫಲಕದಲ್ಲಿ ಅಳವಡಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಎಲ್ಲ ವಾರ್ಡ್‌ಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₨ 2.09 ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಉಪಾಧ್ಯಕ್ಷೆ ಶೀಲಾ ಡಿಸೋಜಾ, ಸದಸ್ಯರಾದ ಬಿ.ಎಂ. ಈಶ್ವರ್, ಮೀನಾಕುಮಾರಿ, ಸುಶೀಲಾ, ಎಸ್. ಸುಮಾ, ಬಿ.ಇ. ರಮೇಶ್, ಬಿ.ಎಂ. ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.