ADVERTISEMENT

ದೇವಾಲಯಗಳಿಂದ ಸಾಮಾಜಿಕ ಪ್ರಜ್ಞೆ ಜಾಗೃತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:20 IST
Last Updated 12 ಏಪ್ರಿಲ್ 2012, 8:20 IST

ಮಡಿಕೇರಿ: ಪ್ರತಿಯೊಬ್ಬ ನಾಗರಿಕರಲ್ಲಿ ಜಾಗೃತಿ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆ ಹಾಗೂ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಆವರಣದಲ್ಲಿ ನಿರ್ಮಿಸಿರುವ ಓಂಕಾರ ಸದನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ಭಾಗಮಂಡಲದ ಭಗಂಡೇಶ್ವರ, ತಲಕಾವೇರಿ, ಪಾಡಿ ಇಗ್ಗುತಪ್ಪ, ಶ್ರೀ ಓಂಕಾರೇಶ್ವರ ಹೀಗೆ ನಾನಾ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಕಾಳಜಿ ವಹಿಸಿ ಅನುದಾನ ಒದಗಿಸಿದೆ ಎಂದು ಅವರು ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಓಂಕಾರೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎಂ.ಪಿ.ಅಪ್ಪಚ್ಚುರಂಜನ್ ಭೋಜನಾಲಯ ಉದ್ಘಾಟಿಸಿ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಸರ್ಕಾರ ಸುಮಾರು 3.5 ಕೋಟಿ ರೂಪಾಯಿ ಅನುದಾನ ಒದಗಿಸಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಟಿ.ಜಾನ್ ಮಾತನಾಡಿ, ಓಂಕಾರೇಶ್ವರ ದೇವಸ್ಥಾನದ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ಕಾಗಿ ತಮ್ಮ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ 2 ಲಕ್ಷ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ.ಎಸ್.ರಮೇಶ್ ಹೊಳ್ಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಓಂಕಾರೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ಕ್ರೀಯಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಓಂಕಾರೇಶ್ವರ ದೇವಾಲಯ ಅಭಿವೃದ್ಧಿಗಾಗಿ 1 ಲಕ್ಷ ರೂ. ಚೆಕ್ಕನ್ನು ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಿಗೆ ನೀಡಿದರು. ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಎಸ್.ದೇವಯ್ಯ, ಗುತ್ತಿಗೆದಾರರಾದ ರವೀಂದ್ರ ರೈ ಅವರನ್ನು  ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎನ್.ರಾಜಾರಾವ್, ಬಲ್ಲಾರಂಡ ಮಣಿಉತ್ತಪ್ಪ, ಬೀನಾ ಬೊಳ್ಳಮ್ಮ, ಎಪಿಎಂಸಿ ಅಧ್ಯಕ್ಷರಾದ ಬೆಲ್ಲು ಸೋಮಯ್ಯ, ಮುಖಂಡರಾದ ಎಂ.ಪಿ.ಸುನಿಲ್ ಸುಬ್ರಮಣಿ, ಜೀರ್ಣೋದ್ದಾರ ಸಮಿತಿ  ಸದಸ್ಯರಾದ ಜಿ. ರಾಜೇಂದ್ರ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ. ಸೋಮೇಶ್ ನಿರೂಪಿಸಿದರು. ಅರುಣ್‌ಕುಮಾರ್ ಸ್ವಾಗತಿಸಿದರು. ಶ್ರದ್ಧಾ ಮತ್ತು ಅರ್ಚಕರಾದ ಸುಬ್ರಮಣ್ಯ ಹೊಳ್ಳ ಅವರು ಪ್ರಾರ್ಥಿಸಿದರು. ಶಾರದಾ ಮಂದಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.