ADVERTISEMENT

ದೋಣಿಯಲ್ಲೇ ಸಾಗಿದೆ ಸೇತುವೆ ಕನಸು

ಸಿ.ಎಸ್.ಸುರೇಶ್
Published 17 ಅಕ್ಟೋಬರ್ 2012, 9:00 IST
Last Updated 17 ಅಕ್ಟೋಬರ್ 2012, 9:00 IST
ದೋಣಿಯಲ್ಲೇ ಸಾಗಿದೆ ಸೇತುವೆ ಕನಸು
ದೋಣಿಯಲ್ಲೇ ಸಾಗಿದೆ ಸೇತುವೆ ಕನಸು   

ನಾಪೋಕ್ಲು: ಸಮೀಪದ ಪಡಿಯಾಣಿ ಗ್ರಾಮದ ಹಾಗೂ ಬೇಂಗೂರು ಗ್ರಾಮಗಳ ನಡುವೆ ಹರಿಯುತ್ತಿರುವ ಕಾವೇರಿ ನದಿಯನ್ನು ದಾಟಿಯೇ ಜನರು ಒಂದು ಗ್ರಾಮದಿಂದ ಇನ್ನೊಂದಕ್ಕೆ ಸಂಚರಿಸಬೇಕಿದೆ.

ಜನರ ಸಂಪರ್ಕಕ್ಕೆ ದೋಣಿಯೇ ಸಾಧನ. ಮಳೆಗಾಲವಿರಲಿ, ಬೇಸಿಗೆಯಿರಲಿ ಕಾವೇರಿ ನದಿ ಕ್ರಮಿಸಲು ಊರಿನ ಜನರು ಈಗಲೂ ದೋಣಿಯನ್ನೇ ಅವಲಂಬಿಸುತ್ತಿದ್ದಾರೆ.

ದೋಣಿಕಡುವಿಗೊಂದು ಸೇತುವೆ ನಿರ್ಮಿಸಬೇಕೆಂಬ ಎಂಬ ಊರ ಜನರ ಬಹುದಿನಗಳ ಕನಸು ಕನಸಾಗಿಯೇ ಉಳಿದಿದೆ. ನಾಪೋಕ್ಲುವಿನಿಂದ 8 ಕಿ.ಮೀ. ದೂರದಲ್ಲಿದೆ ಈ ಪಡಿಯಾಣಿ ಗ್ರಾಮ. ಇದಕ್ಕೆ ಹೊಂದಿಕೊಂಡಂತೆ ಚೇರಂಬಾಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಂಗೂರು ಗ್ರಾಮವಿದೆ. ಪಡಿಯಾಣಿ-ಬೇಂಗೂರು ಗ್ರಾಮಗಳ ನಡುವೆ ಕಾವೇರಿ ಹೊಳೆ ಹರಿಯುತ್ತಿದೆ. ಈ ಸಂಪರ್ಕ ತಾಣಕ್ಕೆ ದೋಣಿಕಡು ಎಂದು ಹೆಸರು.

ತಾಲೂಕು ಪಂಚಾಯತಿ ವತಿಯಿಂದ 2006-07ರ ಸಾಲಿನಲ್ಲಿ ಜನರ ಓಡಾಟಕ್ಕೆ ದೋಣಿ ಒದಗಿಸಲಾಗಿದೆ. ನಾಲ್ಕು ವರ್ಷಗಳಿಂದ ಸ್ಥಳೀಯರಾದ ಕೂಡಕಂಡಿ ಪುಟ್ಟಪ್ಪ ದೋಣಿ ಚಾಲನೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು, ಕೃಷಿಕರು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಎಲ್ಲರೂ ನದಿದಾಟಲು ಈ ದೋಣಿಯನ್ನೇ ಅವಲಂಬಿಸಿದ್ದಾರೆ.

ಬಲ್ಲಮಾವಟಿ ಗ್ರಾಮ ಪಂಚಾಯತಿ ಹಾಗೂ ಚೇರಂಬಾಣೆ ಗ್ರಾಮ ಪಂಚಾಯತಿ ವತಿಯಿಂದ ದೋಣಿ ಚಾಲಕರಿಗೆ ವೇತನ ನೀಡಲಾಗುತ್ತಿದೆ. ಸೇತುವೆ ಇಲ್ಲದಿರುವುದು ಸಂಪರ್ಕಕ್ಕೆ ತೊಡಕಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜನರು ಸಮೀಪದ ನಾಪೋಕ್ಲು ಮುಖಾಂತರ ಮಡಿಕೇರಿಗೆ ತೆರಳಬೇಕು.

ಭಾಗಮಂಡಲಕ್ಕೆ ತೆರಳಲು ಚೇರಂಬಾಣೆ ಮೂಲಕ ರಸ್ತೆ ಸೌಲಭ್ಯ ಕಲ್ಪಿಸಬಹುದು.  ಎರಡೂ ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಇದ್ದರೂ ಕಾವೇರಿ ನದಿ ಕ್ರಮಿಸುವುದು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ರಭಸದ ನೀರು ಹರಿಯುತ್ತದೆ.

ಮಳೆಗಾಲ ಕಳೆದಂತೆ ನೀರಿನ ಹರಿವು ಕಡಿಮೆಯಾದರೂ ನದಿ ದಾಟುವುದು ಕಷ್ಟ ಸಾಧ್ಯ. ಹೀಗಾಗಿ ಗ್ರಾಮಗಳನ್ನು ಬೆಸೆಯುವ ನದಿಯನ್ನು ದಾಟಲು ಕಳೆದ ಹಲವು ವರ್ಷಗಳಿಂದ ದೋಣಿಯೇ ಸಂಪರ್ಕ ಸಾಧನ.

ಒಂದು ಲೆಕ್ಕಾಚಾರದ ಪ್ರಕಾರ ದೋಣಿಕಡುವಿನಲ್ಲಿ ಸೇತುವೆ ನಿರ್ಮಾಣಗೊಂಡಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ತಲುಪಲು ಈ ಭಾಗದ ಜನರಿಗೆ ಕನಿಷ್ಠ ಹದಿನೈದು ಕಿ.ಮೀ. ಸಂಚಾರ ಉಳಿತಾಯವಾಗುತ್ತದೆ. ದೋಣಿ ಕಡುವಿಗೆ ಸೇತುವೆ ನಿರ್ಮಿಸುವಂತೆ ಬಲ್ಲಮಾವಟಿಯ ನಾಗರಿಕ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮನವಿಗೆ ಸ್ಪಂದನೆ ಮಾತ್ರ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.