ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರ ರ್ದ್ದದತಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:25 IST
Last Updated 7 ಫೆಬ್ರುವರಿ 2012, 5:25 IST

ಬೆಂಗಳೂರು: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಿ ಅದನ್ನು ಯೋಜನಾ ಪ್ರಾಧಿಕಾರವನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ ಅವರ ಗಮನ ಸೆಳೆಯುವ ಸೂಚನೆಗೆ ಪೂರಕವಾಗಿ ಜೆಡಿಎಸ್ ಸದಸ್ಯ ಎಂ.ಸಿ. ನಾಣಯ್ಯ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಮಡಿಕೇರಿ ನಗರದ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಜಾಗ ಇಲ್ಲ. ಹೀಗಾಗಿ, ಪ್ರಾಧಿಕಾರವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವು ಕೃಷಿ ಭೂಮಿಯಲ್ಲಿ ನೂರಕ್ಕೂ ಅಧಿಕ ರೆಸಾರ್ಟ್‌ಗಳಿಗೆ ಅನುಮತಿ ನೀಡಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ನಾಣಯ್ಯ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, `ಇದಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಮರು ಪರಿಶೀಲಿಸಿ ಪರಿಸರಕ್ಕೆ
ಹಾನಿಯಾಗದಂತಹ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ~ ಎಂದು ಭರವಸೆ ನೀಡಿದರು.

`ಮಡಿಕೇರಿ ನಗರದ ಸುತ್ತಮುತ್ತಲಿನ ಗಿರಿಕಂದರಗಳಲ್ಲಿಯೂ ರೆಸಾರ್ಟ್‌ಗಳ ನಿರ್ಮಾಣಕ್ಕೆ ಪ್ರಾಧಿಕಾರ ಅನುಮತಿ ನೀಡಿದೆ. ಇದರಿಂದ ಸುತ್ತಲಿನ ಹಚ್ಚ ಹಸಿರಿನ ಪರಿಸರ ಹಾಳಾಗುತ್ತಿದೆ. ಕೃಷಿ ಭೂಮಿಯಲ್ಲಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಪ್ರಾಧಿಕಾರ ಅನುಮತಿ ನೀಡಿರುವ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಸಚಿವರ ಗಮನಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ನಾಣಯ್ಯ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್‌ಕುಮಾರ್, `ಕೊಡಗು ಜಿಲ್ಲೆ ಚಿಕ್ಕದಾದರೂ ಅಲ್ಲಿನ ವ್ಯಕ್ತಿಗಳು ಬಹಳ ಪ್ರಭಾವಿಗಳು~ ಎಂದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನಾಣಯ್ಯ `ಇದು ಸಚಿವರ ದೌರ್ಬಲ್ಯ, ಅಸಹಾಯಕತೆ~ ಎಂದು ಚುಚ್ಚಿದರು.

`ರಾಜ್ಯ ಸರ್ಕಾರಕ್ಕಿಂತ ಯಾವ ಪ್ರಭಾವಿಗಳು ಕೂಡ ದೊಡ್ಡವರಲ್ಲ. ಬೆಂಗಳೂರಂತೂ ಹಾಳಾಗಿದೆ. ನಾನಂತೂ ಮಡಿಕೇರಿಯಲ್ಲೇ ವಾಸ ಮಾಡುತ್ತೇನೆ. ಬೆಂಗಳೂರಿನಲ್ಲಿ ಬದುಕುವಷ್ಟು ಆಸ್ತಿ-ಪಾಸ್ತಿ ಮಾಡಿಲ್ಲ~ ಎಂದು ನಾಣಯ್ಯ ಮಾರ್ಮಿಕವಾಗಿ ಹೇಳಿದರು.

`ರೆಸಾರ್ಟ್‌ಗಳ ನಿರ್ಮಾಣಕ್ಕೆ ನಾನು ಎಷ್ಟೇ ವಿರೋಧ ಮಾಡಿದರೂ ಪ್ರಭಾವಿಗಳು ಅಧಿಕಾರಿಗಳನ್ನು ದೂರವಾಣಿ ಮೂಲಕ ಹೆದರಿಸುತ್ತಿರುವುದರಿಂದ ಮಂಜೂರಾತಿ ನೀಡುತ್ತಿದ್ದಾರೆ. ಸಚಿವರು ಇಂತಹ ಯಾವುದೇ ಒತ್ತಡಕ್ಕೆ ಮಣಿಯದೆ ಇತ್ತೀಚೆಗೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ನೂರಕ್ಕೂ ಅಧಿಕ ರೆಸಾರ್ಟ್‌ಗಳ ನಿರ್ಮಾಣಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸಬೇಕು~ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.