ADVERTISEMENT

ನಾಗರಹೊಳೆ: ಹುಲಿಯ ಜಾಡು ಹಿಡಿದು..

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 8:35 IST
Last Updated 28 ಫೆಬ್ರುವರಿ 2011, 8:35 IST

ಗೋಣಿಕೊಪ್ಪಲು: ನಾಗರಹೊಳೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನ ವನ್ಯಜೀವಿಗಳ ತಾಣ. ಇಲ್ಲಿ ಹುಲಿ, ಚಿರತೆ, ಆನೆ, ಕಾಡುಕೋಣ, ಜಿಂಕೆ, ಕರಡಿ ಮತ್ತಿತರ ವನ್ಯ ಜೀವಿಗಳಿವೆ. ಹುಲಿ ಇಲ್ಲಿನ ಪ್ರಮುಖ ಪ್ರಾಣಿ. ಜಿಂಕೆಗಳ ಆಶ್ರಯದೊಂದಿಗೆ ಬದುಕು ಸಾಗುಸುತ್ತಿದೆ. ನಾಗರಹೊಳೆಯಲ್ಲಿ ಜಿಂಕೆಗಳಿಗೆ ಲೆಕ್ಕವಿಲ್ಲ. ಎಲ್ಲಿ ನೋಡಿದರೂ ಜಿಂಕೆಗಳದ್ದೇ ಪ್ರಾಬಲ್ಯ.ವನ್ಯ ಜೀವಿಗಳ ಬಗ್ಗೆ ಮಾಹಿತಿ ನೀಡಿದ ಪರಿಸರ ತಜ್ಞ ಕೃಷ್ಣ ಚೈತನ್ಯ ಈ ಜಿಂಕೆಗಳನ್ನು ಹಸಿವಾದಾಗ ತಿಂದು ಹುಲಿ ಬದುಕುತ್ತಿದೆ. ಒಂದು ಅಂದಾಜಿನ ಪ್ರಕಾರ, ವರ್ಷಕ್ಕೆ 10 ಜಿಂಕೆಗಳು ಒಂದು ಹುಲಿಗೆ ಬಲಿಯಾಗುತ್ತಿವೆ. ಅಂದರೆ, ಒಂದು ಹುಲಿ ಬದುಕುವ ಸ್ಥಳದಲ್ಲಿ ಕನಿಷ್ಠ 50 ಜಿಂಕೆಗಳಿರಬೇಕು. ಎಲ್ಲ ಜಿಂಕೆಗಳು ಆಹಾರವಾಗಿ ಲಭಿಸುವುದಿಲ್ಲ. 50 ಜಿಂಕೆಗಳಲ್ಲಿ ಕೇವಲ 10 ಜಿಂಕೆಗಳು ಮಾತ್ರ ಆಹಾರವಾಗುತ್ತಿವೆ.

ಹುಲಿ 10 ಕಿ.ಮೀ. ವಿಸ್ತೀರ್ಣದಲ್ಲಿ ತನ್ನ ವ್ಯಾಪ್ತಿ ನಿರ್ಮಿಸಿಕೊಂಡಿರುತ್ತದೆ. ಆ ಸ್ಥಳಕ್ಕೆ ಮತ್ತೊಂದು ಹುಲಿ ಬರದಂತೆ ನೋಡಿಕೊಂಡಿರುತ್ತದೆ. ಒಂದು ವೇಳೆ ಬಂದರೂ ಅದು ತನ್ನ ಯಜಮಾನಿಕೆಯನ್ನು ಕಿತ್ತುಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಹೆಣ್ಣು ಹುಲಿ ಬೆದೆಗೆ ಬಂದಾಗ ಮಾತ್ರ ಗಂಡು ಹುಲಿಯ ಜೊತೆ ಸೇರುತ್ತದೆ. ಇಲ್ಲದಿದ್ದರೆ ಏಕಾಂಗಿಯಾಗಿಯೇ ಜೀವಿಸುತ್ತವೆ.ನಾಗರಹೊಳೆಯಲ್ಲಿ ಹುಲಿ ಮರಗಳ ಎತ್ತರಕ್ಕೆ ಜಿಗಿದು ತೊಗಟೆ ಸೀಳಿ ಗುರುತು ಮಾಡಿರುವುದನ್ನು ಕಾಣುತ್ತೇವೆ. ಒಂದು ಹುಲಿ ಮೊದಲೇ ಗುರುತು ಮಾಡಿ ತನ್ನ ಎಲ್ಲೆ  ಗುರುತಿಸಿಕೊಂಡಿದ್ದರೆ ಆನಂತರ ಮೊತ್ತೊಂದು ಹುಲಿ ಬಂದು ಮತ್ತಷ್ಟು ಮೇಲೆ ಹಾರಿ ತನ್ನ ಸಾಮರ್ಥ್ಯ ತೋರಿ ಗುರುತು ಮಾಡುತ್ತದೆ. ಅಂದರೆ, ಅದಕ್ಕಿಂತ ನಾನೇ ಪ್ರಬಲ ಎಂದು ತೋರಿಸಿಕೊಳ್ಳುವುದಕ್ಕಾಗಿ ಇಂತಹ ಪ್ರಯತ್ನ ನಡೆಸಿರುತ್ತವೆ.

ಹುಲಿಗಳು ತಮಗೆ ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ. ಇಲ್ಲದಿದ್ದರೆ ಇತರ ಪ್ರಾಣಿಗಳು ತಮ್ಮ ಮುಂದೆ ಹೋದರೂ ಕೂಡ ಬೇಟೆಯಾಡುವುದಿಲ್ಲ. ಒಂದು ಜಿಂಕೆಯನ್ನು ಕೊಂದರೆ ಎರಡು ಮೂರು ದಿನ ತಿನ್ನುತ್ತದೆ. ಬಳಿಕ ಉಳಿದ ಮಾಂಸವನ್ನು ಬಿಟ್ಟು ತೆರಳುತ್ತದೆ. ಈ ಮಾಂಸ ಹದ್ದು, ಕಾಡು ನಾಯಿ, ನರಿಗೆ ಆಹಾರವಾಗುತ್ತದೆ.ಹುಲಿ ಇಲ್ಲದಿದ್ದರೆ ಕೆಲವು ಮಾಂಸಹಾರಿ ಪಕ್ಷಿ, ಪ್ರಾಣಿಗಳಿಗೆ ಆಹಾರವೇ ಲಭಿಸುವುದಿಲ್ಲ. ಏಕೆಂದರೆ ಕೆಲವು ಮಾಂಸಾಹಾರಿ ಪ್ರಾಣಿ ಪಕ್ಷಿಗಳಿಗೆ ಬೇಟೆಯಾಡುವುದಕ್ಕೆ ಬರುವುದಿಲ್ಲ. ಹುಲಿ ಇಂತಹ ಪ್ರಾಣಿಗಳಿಗೆ ಪರೋಪಕಾರಿ ಜೀವಿಯಾಗಿದೆ.

ಹುಲಿ ಮರಿಗೆ ಜಿಂಕೆ ಮರಿಗಳು ಆಹಾರ. ಅದಕ್ಕಾಗೇ ಜಿಂಕೆ ಮರಿ ಹಾಕುವ ಅವಧಿಯಲ್ಲಿಯೇ ಹುಲಿಯೂ ಮರಿ ಹಾಕುತ್ತದೆ. ಮೊಲ, ಜಿಂಕೆ ಮತ್ತಿತರ ಪ್ರಾಣಿಗಳನ್ನು ಜೀವಂತವಾಗಿ ಹಿಡಿದು ತರುವ ಹುಲಿ ತನ್ನ ಮರಿಗಳ ಮುಂದೆ ಬಿಟ್ಟು ಅದನ್ನು ಬೇಟೆಯಾಡಲು ಕಲಿಸುತ್ತದೆ. ಬಳಿಕ ಕೊಂದು ಆಹಾರ ನೀಡುತ್ತದೆ. ಹುಲಿ ಪ್ರಾಣಿಗಳನ್ನು ಚರ್ಮ ಸಮೇತ ತಿನ್ನುತ್ತದೆ. ಒಮ್ಮೊಮ್ಮೆ ಮೂಳೆಗಳನ್ನು ತಿನ್ನುತ್ತದೆ. ಬಳಿಕ ಅದು ಅಜೀರ್ಣವಾದಾಗ ಮೂಳೆ ಸಮೇತ ಮಲವಿಸರ್ಜನೆ ಮಾಡುತ್ತದೆ ಎಂದು ಕೃಷ್ಣ ಚೈತನ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.