ADVERTISEMENT

ನಿವೇಶನ ನೀಡಲು ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:20 IST
Last Updated 3 ಅಕ್ಟೋಬರ್ 2012, 6:20 IST

ಸೋಮವಾರಪೇಟೆ: ನಿವೇಶನ ಹೊಂದಿಲ್ಲದ ನಿಜವಾಗಿ ಕಡು ಬಡವರಾದ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚುವಂತೆ ಆಗ್ರಹಿಸಿ ಇಲ್ಲಿಯ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮಂಗಳವಾರ ಜೇಸಿ ವೇದಿಕೆಯಲ್ಲಿ ಧರಣಿ ನಡೆಸಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿಯ ಮಹದೇಶ್ವರ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ಉಚಿತವಾಗಿ ವಿತರಿಸಲು ಮೀಸಲಿಟ್ಟಿದ್ದ ಕೆಲವು ನಿವೇಶನಗಳನ್ನು ಉಳ್ಳವರಿಗೆ ವಿತರಿಸಿದ್ದು ಈ ಕ್ರಮದಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಸತಿಹೀನರೆಂದು ಅರ್ಜಿ ಸಲ್ಲಿಸಿ ನಿವೇಶನ ಪಡೆದ ಕೆಲವರು ಇಂದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಮನೆ ನಿರ್ಮಿಸುತ್ತಿದ್ದಾರೆ. ನಿಜವಾದ ಫಲಾನುಭವಿಗಳು ಜೋಪಡಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಆರೋಪಿಸಿದರು.

ಬೇರೆ ಕಡೆ ನಿವೇಶನ ಹೊಂದಿರುವ ವ್ಯಕ್ತಿಗಳು ಹಾಗೂ ಆಸ್ತಿಯನ್ನು ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಪಂಚಾಯಿತಿ ಆಡಳಿತ ಮಂಡಳಿಗೆ ನೀಡಲಾಗಿದೆ. ಅಂತಹ ಫಲಾನುಭವಿಗಳ ನಿವೇಶನಗಳನ್ನು ವಾಪಸ್ ಪಡೆದು ಬಡವರಿಗೆ ಹಂಚಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಜಿ.ರಘು, ಪದಾಧಿಕಾರಿಗಳಾದ ಪಳನಿಸ್ವಾಮಿ, ರಾಜಪ್ಪ, ಪ್ರಕಾಶ್, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.