ADVERTISEMENT

ಪುತ್ತರಿ ಆಚರಣೆ: ನಾಪೋಕ್ಲುನಲ್ಲಿ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:43 IST
Last Updated 24 ಡಿಸೆಂಬರ್ 2013, 7:43 IST
ಪುತ್ತರಿ ಕಾರ್ಯಕ್ರಮದಲ್ಲಿ ಮೂರ್ನಾಡಿನ ಬಾಡಗ ಭಗವತಿ ತಂಡದವರು ಬೊಳಕಾಟ್‌ ಪ್ರದರ್ಶಿಸಿದರು.
ಪುತ್ತರಿ ಕಾರ್ಯಕ್ರಮದಲ್ಲಿ ಮೂರ್ನಾಡಿನ ಬಾಡಗ ಭಗವತಿ ತಂಡದವರು ಬೊಳಕಾಟ್‌ ಪ್ರದರ್ಶಿಸಿದರು.   

ನಾಪೋಕ್ಲು: ಬೊಳಕಾಟ್‌, ಕೋಲಾಟ್‌, ಕತ್ತಿಯಾಟ್‌, ಉಮ್ಮತ್ತಾಟ್‌... ಹೀಗೆ ವೈವಿಧ್ಯಮಯ ಕೊಡವ ಸಾಂಸ್ಕೃತಿಕ ಲೋಕದ ನೃತ್ಯಗಳು ಒಂದೊಂದಾಗಿ ಅನಾವರಣಗೊಂಡವು.

ಮೂರ್ನಾಡಿನ ಎಂ. ಬಾಡಗ ತಂಡದಿಂದ ಬೊಳಕಾಟ್‌, ಒಂಟಿಯಂಗಡಿಯ ಹೊಟ್ಟೆಂಗಡ ತರುಣ್‌ ಉತ್ತಪ್ಪ ತಂಡದವರಿಂದ ಕೋಲಾಟ, ಬಾಡಗ ಭಗವತಿ ತಂಡದಿಂದ ಕತ್ತಿಯಾಟ್‌, ಗೋಣಿಕೊಪ್ಪದ ಅಮ್ಮಕೊಡವ ಮಹಿಳಾ ಸಮಾಜದ ಸದಸ್ಯರಿಂದ ಉಮ್ಮತ್ತಾಟ್‌, ಶ್ರೀರಾಮಟ್ರಸ್ಟ್‌ ವಿದ್ಯಾರ್ಥಿಗಳಿಂದ ಕೋಲಾಟ್ ಹೀಗೆ ಹಲವು ನೃತ್ಯಗಳು ಪ್ರದರ್ಶನಗೊಂಡವು.

ಕೊಡವ ಜಾನಪದ ನೃತ್ಯವಾದ ಬೊಳಕಾಟ್‌, ಹುತ್ತರಿ ಕೋಲಾಟದಲ್ಲಿ ಪ್ರದರ್ಶನಗೊಳ್ಳುವ ಪುತ್ತರಿ ಕೋಲಾಟ್‌, ಬಲಗೈಯಲ್ಲಿ ಒಡಿಕತ್ತಿ ಎಡಗೈಯಲ್ಲಿ ಪೀಚೆಕತ್ತಿ ಹಿಡಿದು ನರ್ತಿಸುವ ಕತ್ತಿಯಾಟ್, ಮಾತೆ ಕಾವೇರಿಯನ್ನು ಸ್ತುತಿಸುವ ಉಮ್ಮತ್ತಾಟ್‌ ಸೇರಿದಂತೆ ಹಲವು ನೃತ್ಯಗಳು ಮನರಂಜಿಸಿದವು.

ಇವಿಷ್ಟು ಜರುಗಿದ್ದು ಇಲ್ಲಿನ ಕೊಡವ ಸಮಾಜದಲ್ಲಿ. ವಿವಿಧ ಲಯನ್ಸ್‌ ಕ್ಲಬ್‌ಗಳ ಸಹಯೋಗದಲ್ಲಿ ಪ್ರಪ್ರಥಮವಾಗಿ ಏರ್ಪಡಿಸಲಾಗಿದ್ದ ಪುತ್ತರಿ 2013ರ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ನೇತೃತ್ವದ ತಂಡದ ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡಿತು.

ಓಣಂ, ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನು ಆಚರಿಸುವಂತೆ ಕೊಡಗಿನ ಮಂದಿ ವಿಶಿಷ್ಟವಾಗಿ ಆಚರಿಸುವ ಪುತ್ತರಿಯನ್ನು ಲಯನ್ಸ್‌ ಕ್ಲಬ್‌ ವತಿಯಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಲಯನ್ಸ್‌ ಜಿಲ್ಲಾ ಗವರ್ನರ್‌ ಕೆ.ಸಿ. ಪ್ರಭು ‘ಪುತ್ತರಿ 2013’ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುತ್ತರಿಯ ಮಹತ್ವ, ಕೊಡಗಿನ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಆಕಾಶವಾಣಿ ಉದ್ಘೋಷಕ ಮಾದೇಟಿರ ಪಿ. ಬೆಳ್ಯಪ್ಪ ಮಾತನಾಡಿದರು. ಪುತ್ತರಿಯ ಸಾಂಸ್ಕೃತಿಕ ಆಚರಣೆಗಳಾದ ನೆರೆಕಟ್ಟುವುದು ಹಾಗೂ ಕದಿರು ತೆಗೆಯುವ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ಲಯನ್ಸ್‌ ಉಪರಾಜ್ಯಪಾಲ ಮಂಜುನಾಥ ಮೂರ್ತಿ, ಜಿಲ್ಲಾ ಸಾಂಸ್ಕೃತಿಕ ಸಂಚಾಲಕ ಪ್ರಸಾದ್‌ ರೈ, ಕವಿತಾ ಎಸ್‌, ಶಾಸ್ತ್ರಿ, ಕೆ.ಪಿ. ಅಯ್ಯಣ್ಣ, ಕೆ.ಎಂ. ಮುತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಲಯನ್ಸ್‌ ಕ್ಲಬ್‌ ಜಿಲ್ಲಾ 317 ಡಿ. ಸಂಬಂಧಿಸಿದ ಮಂಗಳೂರು , ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು ಇದ್ದರು. ನಾಪೋಕ್ಲು, ಗೋಣಿಕೊಪ್ಪ ಮತ್ತು ಮೂರ್ನಾಡು ವಿಭಾಗಗಳಿಂದ ಪಾಲ್ಗೊಂಡಿದ್ದ ಕಲಾ ತಂಡಗಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ಲಯನ್ಸ್‌ ಜಿಲ್ಲಾ ಸಂಚಾಲಕ ಲಯನ್‌ ಬಿ.ಬಿ. ಬೆಳ್ಯಪ್ಪ ಸ್ವಾಗತಿಸಿದರು. ಲಯನ್‌ ಕೆ.ಎಸ್‌. ಕುಟ್ಟಪ್ಪ ಧ್ವಜ ವಂದನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.