ADVERTISEMENT

ಪೂರ್ಣಗೊಳ್ಳದ ಕಾಮಗಾರಿ: ಮುಗಿಯದ ಬವಣೆ

ಅವ್ಯವಸ್ಥೆಯ ಆಗರವಾಗಿರುವ ಸೋಮವಾರಪೇಟೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ

ಪ್ರಜಾವಾಣಿ ವಿಶೇಷ
Published 19 ಮಾರ್ಚ್ 2014, 9:42 IST
Last Updated 19 ಮಾರ್ಚ್ 2014, 9:42 IST

ಸೋಮವಾರಪೇಟೆ: ಜಿಲ್ಲೆಯ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಗಳು ಹೈಟೆಕ್ ಆಗಿ ಪರಿವರ್ತನೆಗೊಂಡಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ಸೋಮವಾರಪೇಟೆಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಆವರಣ ಹೊಂಡ ಗುಂಡಿಗಳು, ಶೌಚಾಲಯ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

2012ರ ಏಪ್ರಿಲ್‌ 23ರಂದು ಪೊಲೀಸ್‌ ಇಲಾಖೆಯ ನೂತನ ಕಟ್ಟಡದ ಉದ್ಘಾಟನೆಗೆ ಬಂದಿದ್ದ ಅಂದಿನ ಗೃಹ ಮತ್ತು ಸಾರಿಗೆ ಇಲಾಖೆಯ  ಸಚಿವ ಆರ್‌. ಅಶೋಕ್‌ ಅವರು ಬಸ್‌ ನಿಲ್ದಾಣವನ್ನು ಪರಿಶೀಲಿಸಿದ್ದರು. ಆಗ, ಶಾಸಕ ಅಪ್ಪಚ್ಚು ರಂಜನ್‌ ಅವರು ಬಸ್‌ ನಿಲ್ದಾಣದ ಅಭಿವೃದ್ಧಿಗೆ ₨ 50 ಲಕ್ಷ ನೀಡಿ ಎಂದು ಕೇಳಿದಾಗ, ಇಲ್ಲಿನ ಬಸ್‌ನಿಲ್ದಾಣದ ಸ್ಥಿತಿ ಸುಧಾರಣೆಗೆ ಅದು ಸಾಲುವುದಿಲ್ಲ ಎಂದು ಹೇಳಿ  ಸ್ಥಳದಲ್ಲೇ 1.02 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು. ನಂತರ  ಕಾಮಗಾರಿಗೆ  2013ರ ಫೆಬ್ರವರಿ 10 ರಂದು ಚಾಲನೆ ನೀಡಿದ್ದರು. ಒಂದು ವರ್ಷದೊಳಗೆ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಒಟ್ಟು ಕಾಮಗಾರಿಯ ಶೇ 30ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಈ ಕಾಮಗಾರಿಯು ಸದ್ಯದಲ್ಲಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೇವಲ ಆರೇಳು ಕಾರ್ಮಿಕರು ದೊಡ್ಡ ಮೊತ್ತದ ಕಾಮಗಾರಿ  ಮಾಡುತ್ತಿರುವುದರಿಂದ ಅದು ಆಮೆಗತಿಯಲ್ಲಿ ಸಾಗುತ್ತಿದೆ ಎನ್ನಲಾಗುತ್ತಿದೆ.

₨ 1.02 ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಡ ನವೀಕರಣಕ್ಕೆ ₨ 44.30 ಲಕ್ಷ, ಬಸ್ ನಿಲ್ದಾಣದ ಆವರಣ ಕಾಂಕ್ರೀಟೀಕರಣಕ್ಕೆ ₨ 16.12 ಲಕ್ಷ, ಸುತ್ತಲೂ ಆವರಣಗೋಡೆ ನಿರ್ಮಾಣಕ್ಕೆ ₨ 12.70 ಲಕ್ಷ, ಹೈಟೆಕ್ ಶೌಚಾಲಯಕ್ಕೆ ₨ 21.88 ಲಕ್ಷ ಹಾಗೂ ವಿದ್ಯುತ್ ಸೌಕರ್ಯ ಅಳವಡಿಸಲು ₨ 5 ಲಕ್ಷದ ಯೋಜನೆ ಸಿದ್ಧಗೊಂಡಿದೆ. ಆದರೆ, ನಿಲ್ದಾಣದ ಸುತ್ತ ತಡೆಗೋಡೆ ನಿರ್ಮಾಣದ ಕಾಮಗಾರಿ ಮಾತ್ರ ಮುಕ್ತಾಯದ ಹಂತದಲ್ಲಿದ್ದು, ಶೌಚಾಲಯದ ಕಾಮಗಾರಿ ಪ್ರಗತಿಯಲ್ಲಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಬಸ್‌ ನಿಲ್ದಾಣದ ನವೀಕರಣಕ್ಕೆ 27 ಲಕ್ಷ ರೂಪಾಯಿ ಬಿಡುಗಡೆ ಯಾಗಿದ್ದು, ಆ ಹಣದಲ್ಲಿ  ಕಟ್ಟಡ ನವೀಕರಣ ಗೊಂಡಿತು.  ಆದರೆ, ನಿಲ್ದಾಣದಲ್ಲಿ ಈ ಹಿಂದೆ ಇದ್ದಂತಹ ಅವ್ಯವಸ್ಥೆಗಳಲ್ಲಿ ಮಾತ್ರ ಯಾವುದೇ ಸುಧಾರಣೆಯಾಗಲಿಲ್ಲ.
ಏಕೆಂದರೆ, ಅವೈಜ್ಞಾನಿಕವಾಗಿ ಕಾಮಗಾರಿ ನಿರ್ಮಾಣವಾಗಿದ್ದು, ಬಸ್ ನಿಲ್ದಾಣ ಕೇವಲ ಒಂದು ಹೋಟೇಲ್, ಎರಡು ವಾಣಿಜ್ಯ ಮಳಿಗೆ, ಸದಾ ಮುಚ್ಚಿರುವ ಶೌಚಾಲಯಕ್ಕಷ್ಟೇ ಸೀಮಿತವಾಗಿದೆ. ಶೌಚಾಲಯಕ್ಕೂ ಸೂಕ್ತ ನೀರಿನ ವ್ಯವಸ್ಥೆಯಾಗಲಿ, ಶೌಚದ ಗುಂಡಿಯಾಗಲಿ  ನಿರ್ಮಾಣವಾಗಿಲ್ಲ. ದೂರದ ಊರುಗಳಿಂದ ಬರುವ ಪ್ರಯಾಣಿಕರು ಈ ಶೌಚಾಲಯದತ್ತ ಇಣುಕಿಯೂ ನೋಡುತ್ತಿಲ್ಲ. ರಾತ್ರಿ ವೇಳೆ ಇಲ್ಲಿನ ಶೌಚಾಲಯದ ಮಲಿನ ನೀರನ್ನು ಕ್ಲಬ್ ರಸ್ತೆಯ ಚರಂಡಿಗೆ ಹರಿಯ ಬಿಡುತ್ತಾರೆ. ಇದರಿಂದಾಗಿ ವಾತಾವರಣ ದುರ್ಗಂಧಮಯವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಲಿ ಎನ್ನುತ್ತಾರೆ ಪ್ರಯಾಣಿಕರು.

ಮೂಲಸೌಕರ್ಯ ಕಲ್ಪಿಸಲು ಆಗ್ರಹ
ಹೈಟೆಕ್ ಬಸ್ ನಿಲ್ದಾಣ ಕಟ್ಟಿದ ತಕ್ಷಣ ನಿಲ್ದಾಣದ ಸಮಸ್ಯೆ ಸಂಪೂರ್ಣ ಬಗೆಹರಿಯುವುದಿಲ್ಲ. ರಾಜ್ಯದ ಬಹುತೇಕ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವಂತಹ ಗಣಕ ಯಂತ್ರದ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಾಗಬೇಕು. ದಿನಂಪ್ರತಿ 70 ಬಸ್‌ಗಳು ನಿಲ್ದಾಣಕ್ಕೆ ದಿನಂಪ್ರತಿ ಬಂದು ಹೋಗುತ್ತವೆ. 20 ಬಸ್‌ಗಳು ನಿಲ್ದಾಣದಲ್ಲಿ ರಾತ್ರಿ ನಿಲ್ಲುತ್ತವೆ.  ರಾತ್ರಿ ತಂಗುವ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಉಳಿದುಕೊಳ್ಳಲು ವಸತಿ, ಸ್ನಾನದ ಗೃಹದಂತಹ ಮೂಲಸೌಕರ್ಯ ಕಲ್ಪಿಸಬೇಕು.
– ಕೆ.ಪಿ. ದಿನೇಶ್, ಜನಾಂದೋಲನ ಸಮಿತಿ ಸದಸ್ಯ, ಸೋಮವಾರಪೇಟೆ

ಸ್ಥಳೀಯ ಕಾರ್ಮಿಕರ ಕೊರತೆ
ಇಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಬಸ್‌ ನಿಲ್ದಾಣದ ಕಾಮಗಾರಿಯು ₨ 1.02 ಕೋಟಿಯಲ್ಲಿ ನಿರ್ಮಾಣವಾಗುತ್ತಿದ್ದು, ಗುತ್ತಿಗೆದಾರರು ಮೈಸೂರಿನವರಾಗಿರುವುದರಿಂದ, ಕಾರ್ಮಿಕರು ಸ್ಥಳೀಯವಾಗಿ ದೊರೆಯುತ್ತಿಲ್ಲ. ಮೈಸೂರಿನಿಂದಲೇ ಕರೆತರಬೇಕಾಗಿದೆ. ಅಲ್ಲದೆ, ಈ ಬಾರಿ ಹೆಚ್ಚಿನ ಮಳೆಯಾದ ಕಾರಣ ಕೆಲಸ ಮಾಡಲು ಕಷ್ಟವಾಯಿತು. ಇಲ್ಲಿಯವರೆಗೆ ಕಾಮಗಾರಿಗೆ ಯಾವುದೇ ಹಣಕಾಸಿನ ತೊಂದರೆ ಕಾಡಿಲ್ಲ.  ಆದಷ್ಟು ಬೇಗ ಕೆಲಸ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.
– ಸತೀಶ್‌ ಕುಮಾರ್‌ ಜೈನ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT