ADVERTISEMENT

ಪೋರನ ಕೋರಿಯೋಗ್ರಾಫರ್ ಕನಸು!

ಶೈಕ್ಷಣಿಕ ಅಂಗಳ

ಎಸ್.ರವಿ.
Published 16 ನವೆಂಬರ್ 2013, 8:35 IST
Last Updated 16 ನವೆಂಬರ್ 2013, 8:35 IST
ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ವಿದ್ಯಾರ್ಥಿ ನಜೀರ್ ತಾನು ಪಡೆದಿರುವ ಪ್ರಶಸ್ತಿಗಳೊಂದಿಗೆ.
ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ವಿದ್ಯಾರ್ಥಿ ನಜೀರ್ ತಾನು ಪಡೆದಿರುವ ಪ್ರಶಸ್ತಿಗಳೊಂದಿಗೆ.   

ಕುಶಾಲನಗರ: ಚಿಕ್ಕಂದಿನಿಂದಲೇ ನೃತ್ಯದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡು ಸ್ವತಃ ನೃತ್ಯ ಕಲಿತ 14 ರ ಹರೆಯದ ಈ ಪೋರ ಈಗ ದೊಡ್ಡ ಕೋರಿಯೋಗ್ರಾಫರ್ ಆಗಬೇಕೆಂದು ಕನಸು ಕಾಣುತ್ತಿದ್ದಾನೆ.

ಕುಶಾಲನಗರ ಸಮೀಪದ ಮುಳ್ಳುಸೋಗೆಯಲ್ಲಿ ತನ್ನ ತಾಯಿ ಅಕ್ಕ ಅಣ್ಣಂದಿರೊಂದಿಗೆ ವಾಸಿಸುತ್ತಿರುವ ನೃತ್ಯ ಪ್ರೇಮಿ ಬಿ.ಎ. ನಜೀರ್, ಹಾರಂಗಿ ಬಳಿಯಿರುವ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದಾನೆ. ಆತನ ಮಹಾದಾಸೆಗೆ ಬೆನ್ನುಲುಬಾಗಿ ತಾಯಿ, ಅಣ್ಣ, ಅಕ್ಕ ಮತ್ತು ಸುಂಟಿಕೊಪ್ಪದ ಮಂಜುನಾಥ್ ನಿಂತಿದ್ದಾರೆ.

ಬಾಲ್ಯದಲ್ಲಿಯೇ ನೃತ್ಯ ಕಲಿಯುವ ಗೀಳು ಹೊಂದಿದ್ದ ನಜೀರ್, ನೃತ್ಯ ಶಿಕ್ಷಕರಿಂದ ತರಬೇತಿ ಹೊಂದುವ ಶಕ್ತಿ ಹೊಂದಿರಲಿಲ್ಲ. ಆದರೆ, ನೃತ್ಯ ಕಲಿಯಲೇಬೇಕೆಂಬ ಆತನ  ಹಂಬಲವೇ ನೃತ್ಯ ಕಲಿಕೆಗೆ ಗುರುವಾಯಿತ್ತೆಂದು ಹೇಳಿಕೊಳ್ಳುತ್ತಾನೆ ನಜೀರ್. ಹೀಗಾಗಿ, ತಾನು ವಿವಿಧ ಟಿ.ವಿ. ಚಾನಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ನೃತ್ಯ ಕಾರ್ಯಕ್ರಮ ಗಳನ್ನು ನೋಡುತ್ತಾ ಹಾಡು ಗುನುಗಿಕೊಂಡು ಹೆಜ್ಜೆ ಹಾಕಲು ಆರಂಭಿಸಿ, ನೃತ್ಯ ಕಲಿತೆ ಎನ್ನುವ ನಜೀರ್ ಈಗ ಉತ್ತಮ ನೃತ್ಯಗಾರ.

ಶಾಲೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಿನಿಮಾ ಮಾದರಿಯ ಡ್ಯಾನ್ಸರ್ ನಾನೆ ಎಂದು ಹೇಳಿಕೊಳ್ಳುವಾಗ ನಜೀರ್‌ನ ಮುಖದಲ್ಲಿ ಅದೇನೋ ಸಂತೋಷ. ಅಲ್ಲದೆ ತನ್ನ ಸಹಪಾಠಿಗಳಿಗೂ ಕೋರಿಯೋಗ್ರಾಫರ್ ರೀತಿಯಲ್ಲಿ ಡ್ಯಾನ್ಸ್ ಕಲಿಸಿ ಅವರೊಂದಿಗೆ ತಾನೂ ಸೇರಿ ಸಮೂಹ ನೃತ್ಯ ಮಾಡುತ್ತೇನೆ ಎಂದು ಹೇಳುತ್ತಾನೆ ಈ ಪುಟ್ಟಬಾಲಕ.

ಶಾಲೆಯಲ್ಲಿ ಅಷ್ಟೇ ಅಲ್ಲದೆ ಸುಂಟಿಕೊಪ್ಪದಲ್ಲಿ ಆಯುಧಪೂಜೆ ಕಾರ್ಯಕ್ರಮದ ಪ್ರಯುಕ್ತ ವಿಜೃಂಭಣೆಯಿಂದ ನಡೆಯುವ ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಈ ಕಾರ್ಯಕ್ರಮದ ಉದ್ಘಾಟನೆಗೆಂದು ಬಂದಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನಜೀರ್‌ನ ನೃತ್ಯ ಪ್ರದರ್ಶನವನ್ನು ನೋಡಿ ಮೆಚ್ಚಿ ಸ್ವತಃ ಒಂದು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಿ ಶುಭ ಹಾರೈಸಿರುವುದು ಕೋರಿಯೋಗ್ರಾಫರ್ ಆಗುವ ನನ್ನ ಆಸೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎನ್ನುತ್ತಾನೆ.

ಪಾಲಿಬೆಟ್ಟ, ಸುಂಟಿಕೊಪ್ಪ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳ ಮದರಸಗಳಲ್ಲಿ ನಡೆದಿರುವ  ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.

ನಜೀರ್‌ನ ಈ ಸಾಧನೆಯನ್ನು ಗಮನಿಸಿರುವ ಕುಶಾಲನಗರದ ದಾರುಲ್ ಉಲೂಮ್ ಮದರಸದವರು ಇದೀಗ ಮದರಸದ ಮಕ್ಕಳ ವಿಭಾಗದ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಶಾಲೆಯ ಮಕ್ಕಳಿಗೂ ನೃತ್ಯ ಕಲಿಸುವ ಜವಾಬ್ದಾರಿ ನೀಡಿದ್ದಾರೆ.

ನಾವು ಚಿಕ್ಕಮಗಳೂರಿನಲ್ಲಿ ಇರುವಾಗ ಎಲ್.ಕೆ.ಜಿ ಮತ್ತು ಯು.ಕೆ.ಜಿ ಯಲ್ಲಿ ಓದುತಿದ್ದ ನಜೀರ್ ಅದಾಗಲೇ ನೃತ್ಯದಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದ. ಅಲ್ಲದೆ ನೃತ್ಯದೊಂದಿಗೆ ಹಾಡುವುದರಲ್ಲಿಯೂ ಮತ್ತು ವಿವಿಧ ಕ್ರೀಡೆಗಳಲ್ಲೂ ಆಸಕ್ತಿ  ಹೊಂದಿದ್ದ ಎಂದು ಹೇಳುವಾಗ ನಜೀರ್‌ನ ತಾಯಿ ಅಲೀಮರ ಮುಖದಲ್ಲಿ ಸಂತೋಷದ ಸಾಗರವೇ ಕಾಣುತ್ತಿತ್ತು.

ಒಟ್ಟಾರೆ ಉತ್ತಮ ಕೋರಿಯೋಗ್ರಾಫರ್ ಆಗಬೇಕೆಂಬುವ ನಜೀರ್‌ನ ಮಹದಾಸೆಗೆ ಸಹಾಯ ಹಸ್ತಗಳು ಬೇಕಾಗಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.