ಸೋಮವಾರಪೇಟೆ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ನೀಡಲಾಗುತ್ತಿರುವ ಪ್ರೋತ್ಸಾಹ ಹಣ ದುರ್ಬಳಕೆ ಆಗುತ್ತಿರುವ ಶಂಕೆ ಇದ್ದು, ಇಲಾಖೆಯಿಂದ ಅನುಷ್ಠಾನಗೊಂಡಿರುವ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕೆಂದು ರೇಷ್ಮೆ ಇಲಾಖೆ ಅಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಸೂಚಿಸಿದರು.
ಗುರುವಾರ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ರೇಷ್ಮೆ ಇಲಾಖೆಯ ಕಟ್ಟಡ ಪಾಳು ಬಿದ್ದಿದೆ. ಆದರೆ ಸರ್ಕಾರದಿಂದ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ಫಲಾನುಭವಿಗಳ ಪಟ್ಟಿ ತರಿಸಿಕೊಂಡು ತನಿಖೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಇಲಾಖೆ ಕೆಲಸಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಉಪ ಖಜಾನಾಧಿಕಾರಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ಉಪ ಖಜಾನಾಧಿಕಾರಿ ಸುಭದ್ರ ಅವರಿಗೆ ಸಚಿವರು ಸೂಚಿಸಿದರು.
ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ ನಾಡಿನ ಕಡೆ ಬರುವುದು ಕಡಿಮೆಯಾಗುತ್ತದೆ.
ಜಿಲ್ಲೆಯಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಜಲಮೂಲಗಳನ್ನು ಕಂಡು ಹಿಡಿದು ಅಲ್ಲಿ ಕೆರೆಗಳನ್ನು ನಿರ್ಮಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ವಿಸ್ತರಣೆ ಮಾಡಬೇಕಾಗಿರುವುದರಿಂದ ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವು ಮಾಡಿಸುವಂತೆ ಅರಣ್ಯಾಧಿಕಾರಿಗಳಿಗೆ ಆದೇಶಿಸಿದರು.
ಕೊಡಗು ಪ್ಯಾಕೇಜಿನಡಿಯಲ್ಲಿ ಬಿಡುಗಡೆಯಾಗಿರುವ ಹಣದಲ್ಲಿ ತೋಳೂರುಶೆಟ್ಟಳ್ಳಿ, ಕೂತಿ ರಸ್ತೆ ಮತ್ತು ಬೀಟಿಕಟ್ಟೆ, ಚಿಕ್ಕತೋಳೂರು ರಸ್ತೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಸಚಿವರು ಸೂಚಿಸಿದರು.
ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಮತ್ತು ಸಹಾಯಕಿಯರು ಕಡ್ಡಾಯವಾಗಿ ಸಂಜೆ 4 ಗಂಟೆ ವರೆಗೆ ಕರ್ತವ್ಯ ನಿರ್ವಹಿಸಬೇಕು ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಸಮರ್ಪಕವಾಗಿ ನೀಡಬೇಕೆಂದು ಆದೇಶಿಸಿದರು.
ಬಿಇಒ ಕಚೇರಿಗೆ ತೆರಳುವ ರಸ್ತೆಯು ಹಾಳಾಗಿದ್ದು ತಕ್ಷಣವೇ ಚೌಡ್ಲು ಪಂಚಾಯಿತಿಯ ಗಮನಕ್ಕೆ ತಂದು ಲೋಕೋಪಯೋಗಿ ಇಲಾಖೆ ಮೂಲಕ ದುರಸ್ಥಿಗೊಳಿಸಲು ಹೇಳಿದರು.
ತಾಲ್ಲೂಕಿನಾದ್ಯಂತ ಹಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಾಗವು ಒತ್ತುವರಿಯಾಗಿದ್ದು ಕೆಲವು ಶಾಲೆಯ ಜಾಗಗಳಿಗೆ ಸೂಕ್ತ ದಾಖಲಾತಿ ಇರುವುದಿಲ್ಲ ಎಂದು ಬಿಇಓ ರಾಮಚಂದ್ರರಾಜೇ ಅರಸ್ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಹಶೀಲ್ದಾರ್ ಗಮನಕ್ಕೆ ತಂದು ಕಂದಾಯ ಇಲಾಖೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಬಕಾರಿ ಉಪನಿರೀಕ್ಷಕರವರನ್ನು ಸಚಿವ ರಂಜನ್ ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಲವು ಸಿಬ್ಬಂದಿಗಳೇ ಕಾರ್ಯಾಚರಣೆಯ ಮಾಹಿತಿಯನ್ನು ಅಕ್ರಮ ಮಾರಾಟಗಾರರಿಗೆ ನೀಡುತ್ತಿದ್ದಾರೆ. ಅಂತಹವರನ್ನು ಪಟ್ಟಿಮಾಡಿ ನೀಡಿದಲ್ಲಿ ತಕ್ಷಣ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.