ADVERTISEMENT

`ಬದುಕು ಕಟ್ಟಿಕೊಟ್ಟ ಶಾಲೆ ತಾಯಿಗೆ ಸಮಾನ'

ಪೊನ್ನಂಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 6:31 IST
Last Updated 13 ಜೂನ್ 2013, 6:31 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿವಿಧ  ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಹಾಕಿ ಪಟುಗಳನ್ನು ಸನ್ಮಾನಿಸಲಾಯಿತು.
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಹಾಕಿ ಪಟುಗಳನ್ನು ಸನ್ಮಾನಿಸಲಾಯಿತು.   

ಗೋಣಿಕೊಪ್ಪಲು: ಅಕ್ಷರ ಕಲಿತ ಶಾಲೆಗೆ ಒಮ್ಮೆಯಾದರೂ ಭೇಟಿ ನೀಡಿ ಕೈಲಾದ ಸಹಾಯ ಮಾಡಿದರೆ ಅಂತಹ ಶಾಲೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.

ಸಮೀಪದ ಪೊನ್ನಂಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಬುಧವಾರ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಾವು ಕಲಿತ ಶಾಲೆಗೆ ಭೇಟಿ ಕೊಟ್ಟು ಅದನ್ನು ಮುಟ್ಟಿ ನೋಡಿದರೆ ತಾಯಿಯನ್ನು ಸ್ಪರ್ಶಿಸಿದ ಅನುಭವ ವಾಗುತ್ತದೆ. ಶಾಲೆ ನಮಗೆ ಬದುಕು ಕಟ್ಟಿಕೊಟ್ಟಿದೆ. ಅದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು  ಭಾವುಕರಾಗಿ ನುಡಿದರು.

ಕೊಡಗಿನಲ್ಲಿ ದಾನಿಗಳ ಮತ್ತ ಶಿಕ್ಷಣಾಭಿಮಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳೂ ಉತ್ತಮವಾಗಿ ಬೆಳೆದಿವೆ. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಪೊನ್ನಂಪೇಟೆ ಶಾಲೆಗೆ ಈಗಾಗಲೆ 152 ವರ್ಷ ಕಳೆದಿದೆ. ಈ ಶಾಲೆಯ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳನ್ನು ಸ್ಮರಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ ಹಿಂದಿನವರ ದೂರ ದೃಷ್ಟಿಯಿಂದ ಕೊಡಗಿನಲ್ಲಿ ಬಹಳಷ್ಟು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಪೈಪೋಟಿ ಯುಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಪ್ರತಿಯೊಬ್ಬರೂ ಚಿಂತಿಸುತ್ತಾರೆ. ಈ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಕಡೆಗೆ  ಗಮನ ಹರಿಸಬೇಕು ಎಂದು ನುಡಿದರು.

ತಾಲ್ಲೂಕು  ಪಂಚಾಯಿತಿ ಸದಸ್ಯ  ಕೋಳೆರ ದಯಾ ಚಂಗಪ್ಪ ಮಾತನಾಡಿ 152 ವರ್ಷಗಳನ್ನು ಪೂರೈಸಿರುವ ಶಿಕ್ಷಣ ಸಂಸ್ಥೆ 18 ವರ್ಷಗಳಿಂದ ಸುಣ್ಣ ಬಣ್ಣ ಕಾಣದೇ ಸೊರಗಿತ್ತು. ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಗಳ ಗುಣಮಟ್ಟ ಕಾಪಾಡಲು ಗಮನಹರಿಸಬೇಕು ಎಂದು ಹೇಳಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಂ.ಎಸ್.ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ, ಡಿಡಿಪಿಐ ಬಸವರಾಜು, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಿಮ್ಮಿ ಅಣ್ಣಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಶ್ರೀಧರ್ ಹಾಜರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ  ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಹಾಕಿಪಟುಗಳಾದ ಚೆಪ್ಪುಡೀರ  ಪೂಣಚ್ಚ, ಕುಲ್ಲೇಟಿರ ಉತ್ತಯ್ಯ ಸೇರಿದಂತೆ 50ಕ್ಕೂ ಹೆಚ್ಚು ಮಂದಿಗೆ ಸನ್ಮಾನ ಮಾಡಲಾಯಿತು.

ಬೆಳಿಗ್ಗೆ ನಡೆದ ಶತಮಾನೋತ್ಸವ ಕಾರ್ಯಕ್ರಮವನ್ನು ರಾಮಕೃಷ್ಣ ಶಾರದಾಶ್ರಮದ ಜಗದಾತ್ಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಬಾನಂಡ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ಓಟಗಾರ ಪೆಮ್ಮಂಡ ಅಪ್ಪಯ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪೆಮ್ಮಂಡ ಮಾಯಮ್ಮ  ನಿರ್ಮಿಸಿಕೊಟ್ಟ  ಧ್ವಜಸ್ತಂಭವನ್ನು ಡಿಡಿಪಿಐ ಬಸವರಾಜು ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ,  ಹಿರಿಯ ಗಾಂಧಿವಾದಿ ಮಳುವಂಡ ಕುಟ್ಟಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ, ಜಿಲ್ಲಾ ಪಂಚಾಯಿತಿ  ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಣಿ ನಂಜಪ್ಪ, ಮುಖಂಡರಾದ ಸುಳ್ಳಿಮಾಡ ತಿಮ್ಮಯ್ಯ, ಕೊಡವ ಸಮಾಜದ ಅಧ್ಯಕ್ಷ ಚೆಪ್ಪುಡೀರ  ಪೊನ್ನಪ್ಪ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಸೋಮಯ್ಯ, ಸದಸ್ಯರಾದ ದಾದು ಪೂವಯ್ಯ, ಕಾಕಮಾಡ ಚಂಗಪ್ಪ, ಚಿಮ್ಮಣಮಾಡ ಸೋಮಯ್ಯ, ಮುಖ್ಯ ಶಿಕ್ಷಕಿ ಹೇಮಾವತಿ ಹಾಜರಿದ್ದರು.ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.