ADVERTISEMENT

ಬಾಪೂ ಮೈದಾನದಲ್ಲಿ ಮಕ್ಕಳ ಕಲರವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:50 IST
Last Updated 8 ಫೆಬ್ರುವರಿ 2012, 8:50 IST

ಮಡಿಕೇರಿ: ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ವಿಕಸನ ಬೆಳವಣಿಗೆ ಜೊತೆಗೆ ಪ್ರತಿಭೆಯನ್ನು ಹೊರತರುವಲ್ಲಿ ಮಕ್ಕಳ ಹಬ್ಬ ಸಹಕಾರಿ ಎಂದು ಜಿ.ಪಂ.ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಹೇಳಿದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಗ್ರಾಮೀಣ ಸೊಗಡಿನ ಆಟಗಳು ಮರೆಯಾಗುತ್ತಿದ್ದು ಕಂಪ್ಯೂಟರ್ ಮುಂದೆ ಕುಳಿತು ಆಟವಾಡುವ ಕಾಲ ಬಂದಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಗ್ರಾಮೀಣ ಬದುಕಿನ ಅರಿವನ್ನು ಮಕ್ಕಳಲ್ಲಿ ಮೂಡಿಸಲು ಸಾಧ್ಯ ಎಂದರು.

ಈ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ                ಹಮ್ಮಿಕೊಳ್ಳುವಂತಾಗಬೇಕು. ಇದಕ್ಕಾಗಿ ಜಿ.ಪಂ.ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದರು.

ಜಿ.ಪಂ.ಉಪಾಧ್ಯಕ್ಷೆ ಎಚ್.ಎಂ.ಕಾವೇರಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಯಾಂತ್ರೀಕರಣ ವಾಗುತ್ತಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದರು.

ಈ ಕಾರ್ಯಕ್ರಮದಿಂದ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಪರಸ್ಪರ ಭ್ರಾತೃತ್ವ ಭಾವನೆ ಬೆಳೆಯುತ್ತದೆ. ಹಾಗೆಯೇ ಒಟ್ಟಾಗಿ ಕಲಿತು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನ ಮಾಡಲು ಉತ್ತಮ ಅವಕಾಶವಾಗಿದೆ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರದಲ್ಲಿ ಕಲೆ, ಸಾಹಿತ್ಯ ಸಂಗೀತ ಮತ್ತು ನೃತ್ಯದಂತಹ ಸಾಂಸ್ಕೃತಿಕ ವಿಚಾರ ವಿನಿಮಯ ಮಾಡಿಕೊಳ್ಳಲು ಮಕ್ಕಳ ಹಬ್ಬವು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಜಿ.ಪಂ.ಸದಸ್ಯ ಕುಶಾಲಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಕಾವೇರಪ್ಪ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ, ಸಹಾಯಕ ನಿರ್ದೇಶಕ ಲಿಂಗರಾಜು, ಶಿಕ್ಷಣ ಇಲಾಖೆಯ ಸಂಯೋಜಕ ಎಚ್.ಆರ್.ಮುತ್ತಪ್ಪ, ಜಿಲ್ಲಾ ವಿಕಲಚೇತನರ ಅಭಿವೃದ್ದಿ ಅಧಿಕಾರಿ ನೀರಬಿದರೆ ನಾರಾಯಣ, ತಾಲ್ಲೂಕು ಶಿಶು ಅಭಿವೃದ್ದಿ ಅಧಿಕಾರಿ ಮಾದಪ್ಪ ಮತ್ತಿತರರು ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಿರೂಪಣಾಧಿಕಾರಿ ಎಂ.ವಿ.ಜಯರಾಂ ಸ್ವಾಗತಿಸಿದರು, ಕೃಷ್ಣವೇಣಿ ಪ್ರಸಾದ್ ಪ್ರಾರ್ಥಿಸಿದರು, ಸಾರ್ವಜನಿಕ  ಶಿಕ್ಷಣ ಇಲಾಖೆಯ ಶಿಕ್ಷಣ ಅಧಿಕಾರಿ ಕೆ.ವಿ.ಸುರೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.