ADVERTISEMENT

ಬಿಜೆಪಿ ರಾಜ್ಯ ಕಂಡ ಭ್ರಷ್ಟ ಸರ್ಕಾರ:ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 7:10 IST
Last Updated 19 ಏಪ್ರಿಲ್ 2011, 7:10 IST

ಮಡಿಕೇರಿ: ಬಿಜೆಪಿ ಸರ್ಕಾರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಕಾಂಗ್ರೆಸ್ ವಿರಮಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಬಿಜೆಪಿ ಸರ್ಕಾರ ಕೋಟಿಗಟ್ಟಲೆ ಅವ್ಯವಹಾರ ನಡೆಸಿದೆ. ಸರ್ಕಾರದ ಎಲ್ಲಾ ಅವ್ಯವಹಾರಗಳಿಗೆ ಬಿಜೆಪಿ ಹೈಕಮಾಂಡ್ ಬೆಂಬಲ ನೀಡುತ್ತಿದೆ.

ಇಲ್ಲಿಯವರೆಗೆ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ನಿರ್ಮಿಸಿಕೊಡದ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ದಿವಾಳಿಯಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಸಲುವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಗಡ್ಕರಿಯವರನ್ನೇ ಕೊಂಡುಕೊಂಡಿದ್ದಾರೆ ಎಂದು ಟೀಕಿಸಿದ ಅವರು, ಸಂವಿಧಾನಕ್ಕೆ ವಿರುದ್ಧವಾಗಿ ಹಿಂದುತ್ವದ ಆವತಾರದಲ್ಲಿ ಆಡಳಿತ ನಡೆಸಲು ಹುನ್ನಾರ ನಡೆಸುತ್ತಿರುವ ಬಿಜೆಪಿ ಜನರ ಭಾವನಾತ್ಮಕ ವಿಚಾರವನ್ನು ಕೆರಳಿಸುತ್ತಿದೆ. ಈ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ಸರ್ಕಾರ ಜನರ ಆಶೋತ್ತರಗಳನ್ನು ಮರೆತಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸ್ಥಾನ ನೀಡಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶೇ.33ರಷ್ಟು ಮೀಸಲಾತಿಯನ್ನೂ ಜಾರಿಗೊಳಿಸಲಿದೆ. ಇದಕ್ಕಾಗಿ ಮಹಿಳೆಯರು ಕೂಡ ಒತ್ತಡ ಹೇರಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸಂಸದ ಎಚ್.ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್‌ನ ಸಾಧನೆಗಳು ಪ್ರಚಾರದ ಕೊರತೆಯಿಂದ ಜನತೆಗೆ ತಿಳಿಯದಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೆಂದು ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಶೈಕ್ಷಣಿಕ ರಂಗದಲ್ಲಿ 1ರಿಂದ ಪಿಯುಸಿ ವರೆಗಿನ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿರುವ ಕೇಂದ್ರ ಸರ್ಕಾರ ಸುಮಾರು 60ಲಕ್ಷ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದೆ ಎಂದು ಅವರು ಹೇಳಿದರು.

ಅರಕಲುಗೋಡು ಶಾಸಕ ಎ.ಮಂಜು ಮಾತನಾಡಿ, ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆದಲ್ಲಿ ಪಕ್ಷದ ಬೆಳವಣಿಗೆ ಸುಲಭ ಎಂದರು. ಮಾಜಿ ಸಚಿವೆ ಸುಮಾ ವಸಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್, ಗುಂಡ್ಲುಪೇಟೆ ಶಾಸಕ ಮಹದೇವ್ ಪ್ರಸಾದ್ ಇತರರು ಸಮಾರಂಭದಲ್ಲಿ ಮಾತನಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.