ADVERTISEMENT

ಬುಡಕಟ್ಟು ಜನರ ಜ್ಞಾನದಿಂದ ಭಾಷೆ ಬೆಳವಣಿಗೆ

‘ಕನ್ನಡ ಭಾಷಿಕ ಪರಿಸರ’ ಗೋಷ್ಠಿಯಲ್ಲಿ ಡಾ.ಕಿಕ್ಕೇರಿ ನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 9:35 IST
Last Updated 9 ಜನವರಿ 2014, 9:35 IST

ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ಬುಡಕಟ್ಟು ಜನಾಂಗದ ಅಪಾರವಾದ ಸ್ಥಳೀಯ ಜ್ಞಾನದ ಉಳಿವಿನಿಂದ ಮಾತ್ರವೇ ಕನ್ನಡ ಉಳಿದು ಬೆಳೆಯಲು ಸಾಧ್ಯ ಎಂದು  ಡಾ. ಕಿಕ್ಕೇರಿ ನಾರಾಯಣ ಅವರು ಕಿವಿಮಾತು ಹೇಳಿದರು.

80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಭಾಷಿಕ ಪರಿಸರ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಭಾಷಾ ಬಾಂಧವ್ಯದ ಸ್ವರೂಪಗಳು ಮತ್ತು ಸಮಸ್ಯೆಗಳು ಎಂಬ ವಿಷಯ ಮಂಡನೆ ಮಾಡಿದರು. ಒಂದು ಭಾಷೆಯು ಮತ್ತೊಂದು ಭಾಷೆಗೆ ವೈರುಧ್ಯವಾಗಿರುತ್ತದೆ ಎಂಬ ಮನೋಭಾವ ಇಂದಿನ ಜನಮಾನಸದಲ್ಲಿ ಇರಬಹುದು. ಆದರೆ ಒಂದು ಭಾಷೆಯ ಪದಸಂಪತ್ತು ಮತ್ತೊಂದು ಭಾಷೆಯ ಉತ್ಕೃಷ್ಟ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂಬುದು ಸ್ಪಷ್ಟ ಎಂದರು.

ಜಾಗತೀಕರಣದ ಸಂದರ್ಭದಲ್ಲಿ ಏಕ ಭಾಷೆಯು ಪಾರಮ್ಯ ಮೆರೆಯ ಹೊರಟಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಪ್ರತಿ ಭಾಷೆಯ ಬೆಳವಣಿಗೆಯಿಂದ ಮಾತ್ರವೇ ಸಾಧ್ಯ ಎಂದರು. ಭಾಷೆ ಎಂದರೆ ಕೇವಲ ಲಿಪಿಯಲ್ಲ. ಅದು ಸಮುದಾಯವೊಂದರ ಸಂಸ್ಕೃತಿ, ಆಚಾರ, ವಿಚಾರ, ಬದುಕಿನ ಶೈಲಿಯಾಗಿರುತ್ತದೆ. ಅದಕ್ಕಿಂತ ಹೆಚ್ಚಿನದಾಗಿ ಅದೊಂದು ಜ್ಞಾನ ಸಂಪತ್ತು. ಕೊಡಗಿನ ಬುಡಕಟ್ಟು ಜನಾಂಗವೊಂದಕ್ಕೆ ಮುನ್ನೂರಕ್ಕೂ ಹೆಚ್ಚು ಸಸ್ಯ ಸಂಪತ್ತಿನ  ಜ್ಞಾನವಿರುತ್ತದೆ. ಅದರ ಔಷಧಿ ಗುಣಗಳ ಬಗ್ಗೆ ಅಪಾರವಾದ ಅರಿವು ಇರುತ್ತದೆ. ಇದನ್ನು ಕೀಳಾಗಿ ಕಾಣುತ್ತಾ, ಅಗೌರವಿಸುತ್ತಾ ನಾಶಪಡಿಸಲು ಪ್ರಯತ್ನಿಸಿದರೆ ಅದು ಭಾಷೆಯನ್ನು ನಾಶಪಡಿಸಿದಂತೆ ವಿನಾಃ ಬೇರೇನೂ ಅಲ್ಲ. ಆದ್ದರಿಂದ ಭಾಷೆಯ ಉಳಿವಿನ ಕೆಲಸ ನಡೆಯಬೇಕಾದರೆ ಪ್ರತಿ ಜನಸಮುದಾಯದ ಜ್ಞಾನ ಸಂಪತ್ತನ್ನು ಸಹಬಾಳ್ವೆಯಿಂದ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಅಮೆರಿಕಾ ತನ್ನ ಸಾಮ್ರಾಜ್ಯ ಶಾಹಿ ಶಕ್ತಿಯಿಂದಾಗಿ ತನ್ನ ದೇಶದಲ್ಲೇ 20 ವರ್ಷಗಳ ಅವಧಿಯಲ್ಲಿ 200 ಕ್ಕೂ ಹೆಚ್ಚು ಭಾಷೆಗಳನ್ನು ನಾಶಪಡಿಸಿದೆ. ಆದರೆ ಭಾರತದಲ್ಲಿ ಬುಡಕಟ್ಟು ಜನಾಂಗಗಳ ಭಾಷೆಯನ್ನು ಬಲವಂತವಾಗಿ ನಾಶಪಡಿಸುವ ಹುನ್ನಾರ ನಡೆಯದಿದ್ದರೂ ಏಕ ಭಾಷೆ ತನ್ನ ಪಾರಮ್ಯ ಮೆರೆಯುತ್ತಿದೆ. ಇದರಿಂದಲೇ ವೈವಿಧ್ಯಮಯವಾದ ಭಾಷೆ, ಸಂಸ್ಕೃತಿಗಳು ನಶಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡಾ. ಎಂ.ಟಿ. ರತಿ ಅವರು ‘ಕನ್ನಡ, ಕೊಡವ ಮತ್ತು ಅರೆಭಾಷೆ’ಗಳ ಕುರಿತ ವಿಷಯ ಮಂಡಿಸಿ ಸಾಮಾಜಿಕ ಮತ್ತು ಆರ್ಥಿಕವಾಗಿ ಅಂತರಗಳು ಏರ್ಪಟ್ಟಂತೆ  ಭಾಷಿಗರ ನಡುವೆ ಬಾಂಧವ್ಯಗಳು ಸಂಕುಚಿತಗೊಳ್ಳುತ್ತವೆ. ಇದೇ ಸಮಸ್ಯೆ ಕೊಡಗಿನಲ್ಲೂ ಕಾಡುತ್ತಿದೆ ಎಂದರು.

ಡಾ. ಗಣನಾಥ ಎಕ್ಕಾರು ಅವರು ಕನ್ನಡ, ತುಳು, ಕೊಂಕಣಿ ಮತ್ತು ಬ್ಯಾರಿ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.
ತುಳು, ಕೊಂಕಣಿ ಮಾತನಾಡುವವರೂ ಕನ್ನಡವನ್ನೇ ಶೈಕ್ಷಣಿಕ ಮತ್ತು ಆಡಳಿತ ಭಾಷೆಯನ್ನಾಗಿಸಿಕೊಂಡಿದ್ದಾರೆ. ಅಂದ ಮಾತ್ರಕ್ಕೆ  ಅವರ ಭಾಷೆ ಸಾಹಿತ್ಯಕ್ಕೆ ಇತಿಹಾಸವಿಲ್ಲ ಎಂದಲ್ಲ. ಕೊಂಕಣಿ ಮತ್ತು ತುಳು ಭಾಷೆಯ ಸಾಹಿತ್ಯ ಕೃತಿಗಳು ಇತರೆ ಭಾಷೆಯ ಲಿಪಿಯಲ್ಲಿ ಸಾಕಷ್ಟು ರಚಿಸಲ್ಪಟ್ಟಿವೆ. ಅದಕ್ಕಿಂತ ಮುಖ್ಯವಾಗಿ ಕೊಂಕಣಿ ಮತ್ತು ತುಳು ಮಾತೃ ಭಾಷೆಯನ್ನಾಡುವವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಆದರೆ ಸಾಂಸ್ಕೃತಿಕ ಪಲ್ಲಟದಿಂದ ಭಾಷೆಯ ಮೇಲೆ ಗಂಭೀರ ಪ್ರವಾವ ಬೀರುತ್ತಿವೆ ಎಂದರು.

ಡಾ. ವ್ಹಿ.ಜಿ. ಪೂಜಾರ್ ಕನ್ನಡ, ಉರ್ದು ಮತ್ತು ತೆಲುಗು ಭಾಷೆಗಳ ಕುರಿತು ವಿಷಯ ಮಂಡನೆ ಮಾಡಿದರು. ಕವಿರಾಜಮಾರ್ಗದಲ್ಲಿ ಶ್ರೀವಿಜಯ ಕನ್ನಡಂಗಳ್ ಎಂಬ ಪದವನ್ನು ಬಳಸಿರುವುದನ್ನು ನೋಡಿದರೆ ಕನ್ನಡದ ಉಪಭಾಷೆಗಳು ಸಾಕಷ್ಟಿವೆ ಎಂಬುದು ಸ್ಪಷ್ಟವಾಗುತ್ತದೆ. ವಿವಿಧ ರಾಜಮನೆತನಗಳ ಆಡಳಿತಗಳು ಕರ್ನಾಟಕದ ಮೇಲೆ ಪ್ರಭಾವ ಬೀರಿದ ಪರಿಣಾಮ ಕನ್ನಡದಲ್ಲಿ ಹುಮನಾ ಬಾದ್, ಫಿರೋಜಾಬಾದ್ ಮತ್ತು ಗುಲ್ಬರ್ಗಾ ಎಂಬ ಊರುಗಳ ಹೆಸರುಗಳು ಬಂದಿವೆ. ಅಲ್ಲದೆ ಕನ್ನಡ ಭಾಷೆಗೆ ಸಾಕಷ್ಟು ಪದಗಳು ಕೊಡುಗೆ ಬಂದಿರುವುದು ಕನ್ನಡದ ಬೆಳವಣಿಗೆಗೆ ಅನುಕೂಲವಾಗಿದೆ ಎಂದರು. ಡಾ. ತಮಿಳು ಸೆಲ್ವಿ ಅವರು ‘ಕನ್ನಡ, ತಮಿಳು, ಮಲೆಯಾಳಂ’ ಭಾಷೆ ಕುರಿತು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.