ADVERTISEMENT

ಭೂಮಿ ಪರಭಾರೆ ಮಾಡಿದರೆ ಶಿಸ್ತು ಕ್ರಮ: ರಂಜನ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 7:20 IST
Last Updated 13 ಏಪ್ರಿಲ್ 2011, 7:20 IST
ಭೂಮಿ ಪರಭಾರೆ ಮಾಡಿದರೆ ಶಿಸ್ತು ಕ್ರಮ: ರಂಜನ್
ಭೂಮಿ ಪರಭಾರೆ ಮಾಡಿದರೆ ಶಿಸ್ತು ಕ್ರಮ: ರಂಜನ್   

ಸೋಮವಾರಪೇಟೆ: ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆಯುವ ಫಲಾನುಭವಿಗಳು ಮುಂದಿನ ದಿನಗಳಲ್ಲಿ ತಮ್ಮ ಭೂಮಿಯನ್ನು ಪರಭಾರೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಹಾಗೂ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಎಂ.ಪಿ.ಅಪ್ಪಚ್ಚು ರಂಜನ್ ಎಚ್ಚರಿಸಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಅಕ್ರಮ ಸಕ್ರಮ ಸಭೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಸಮಿತಿಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ 228 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ತಾಲ್ಲೂಕಿನಿಂದ 9 ಸಾವಿರಕ್ಕೂ ಮಿಕ್ಕಿದ ಅರ್ಜಿಗಳು ಬಂದಿದ್ದು ಅವುಗಳನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ವಾರದಲ್ಲಿ ಒಂದು ದಿನ ಸಮಿತಿಯು ಅರ್ಜಿಗಳನ್ನು ಪರಿಶೀಲನೆ ನಡೆಸುತ್ತದೆ. ಎಲ್ಲಾ ಅರ್ಜಿಗಳನ್ನೂ ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಕ್ಕುಪತ್ರ ಪಡೆದವರು ಭೂಮಿಯನ್ನು ಮಾರಾಟ ಮಾಡದೆ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಉತ್ತಮ ಆದಾಯ ಗಳಿಸುವತ್ತ ಗಮನ ಹರಿಸಬೇಕು. ಒಂದು ವೇಳೆ ಭೂಮಿಯನ್ನು ಪರಭಾರೆ ಮಾಡಿದರೆ ಅಂತಹ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.

ಸರ್ಕಾರದ ಆದೇಶದ ಪ್ರಕಾರ ರಸ್ತೆ ನಿರ್ಮಿಸಲು ಜಾಗದ ಅವಶ್ಯಕತೆಯಿದ್ದರೆ 15 ಅಡಿಗಳಷ್ಟು ಸ್ಥಳವನ್ನು ಬಿಟ್ಟುಕೊಡಲು ಭೂಮಾಲೀಕರು ಮುಂದಾಗಬೇಕು. ರಸ್ತೆ ಕೆಲಸಕ್ಕೆ ಅನಗತ್ಯ ತಡೆಯೊಡ್ಡಬಾರದು ಎಂದರು.

ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಚಾರ ನೀಡುತ್ತಿಲ್ಲವೆಂಬ ಶಾಸಕರ ಆರೋಪದ ಬಗ್ಗೆ ಸುದ್ದಿಗಾರರು ಅವರ ಗಮನ ಸೆಳೆದರು. ‘ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದರೂ, ವಾರಪತ್ರಿಕೆಯೊಂದು ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಿಂತುಹೋಗಿವೆ ಎಂದು ಬಿಂಬಿಸುತ್ತಿರುವ ಬಗ್ಗೆ ಟೀಕಿಸಿದ್ದೇನೆ. ಈ ಮಾತು ಇತರ ಸುದ್ದಿ ಮಾಧ್ಯಮಗಳ ಕುರಿತಾಗಿ ಅನ್ವಯಿಸುವುದಿಲ್ಲ ಎಂಬ ಸ್ಪಷ್ಟನೆ ನೀಡಿದರು. ಉತ್ತಮ ಕೆಲಸಗಳಾದರೆ ಅದನ್ನು ಜನರಿಗೆ ತಿಳಿಸಿ, ಆಗಿಲ್ಲವೆಂದಾದರೆ ನಿರ್ದಾಕ್ಷಿಣ್ಯವಾಗಿ ಟೀಕಿಸಿ’ ಎಂದರು.

ತಹಶೀಲ್ದಾರ್ ಎ.ದೇವರಾಜ್, ಸಮಿತಿಯ ಸದಸ್ಯರಾದ ಎಂ.ಎನ್.ಕೊಮಾರಪ್ಪ, ಉಷಾ ತೇಜಸ್ವಿ, ಕುಶಾಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.