ADVERTISEMENT

ಮಡಿಕೇರಿ ನಗರಸಭೆ ಸಾಮಾನ್ಯ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:20 IST
Last Updated 18 ಫೆಬ್ರುವರಿ 2011, 7:20 IST

ಮಡಿಕೇರಿ: ನಗರದಲ್ಲಿ ನೋಂದಣಿ ಮಾಡದಂತಹ ಅನಧಿಕೃತ ಹೋಂ ಸ್ಟೇಗಳನ್ನು ಗುರುತಿಸಿ ಅವುಗಳಿಗೆ ಪೂರೈಸುವ ಕುಡಿಯುವ ನೀರಿಗೆ ವಾಣಿಜ್ಯ ಕರ ವಿಧಿಸಲು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.ನಗರಸಭೆ ನೂತನ ಸಂಕೀರ್ಣದ ಸಭಾಂಗಣದಲ್ಲಿ ನಗರಸಭೆ ನೂತನ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ವಾಣಿಜ್ಯ ಕರ ವಿಧಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ‘ನಗರದಲ್ಲಿ 941 ಹೋಂ ಸ್ಟೇಗಳಿದ್ದು, ಈ ಪೈಕಿ 600ರಿಂದ 700ರಷ್ಟು ಹೋಂ ಸ್ಟೇಗಳು ಅನಧಿಕೃತವಾಗಿವೆ. ಅಲ್ಲದೆ, ಹೊರಗಿನ ಕೆಲವರು ಬಾಡಿಗೆ ಮನೆಗಳನ್ನು ಪಡೆದು ಹೋಂ ಸ್ಟೇ ನಡೆಸುತ್ತಿದ್ದಾರೆ. ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ನೋಂದಣಿ ಮಾಡದಂತಹ ಅನಧಿಕೃತ ಹೋಂ ಸ್ಟೇಗಳನ್ನು ಗುರುತಿಸಿ ಅವುಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ವಾಣಿಜ್ಯ ದರ ವಿಧಿಸಬೇಕು’ ಎಂದು ಸಲಹೆ ಮಾಡಿದರು.

‘ಪ್ರತಿ ವಾರದ ಕೊನೇ ಮೂರು ದಿನಗಳಲ್ಲಿ ಪ್ರತಿ ದಿನ ತಲಾ ಐದು ಸಾವಿರ ಸಾವಿರದಂತೆ 15 ಸಾವಿರ ಮಂದಿ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ. ನಗರದ 33 ಸಾವಿರ ಜನಸಂಖ್ಯೆ ಜೊತೆಗೆ, ಪ್ರತಿ ತಿಂಗಳು ಹೊರಗಿನಿಂದ ಬರುವ 60 ಸಾವಿರ ಪ್ರವಾಸಿಗರಿಗೆ ಕುಡಿಯುವ ನೀರು ಪೂರೈಸಬೇಕಾಗಿದೆ. ಕೆಲವೆಡೆ ಹೋಂ ಸ್ಟೇಗಳು ಕುಡಿಯುವ ನೀರಿನ ಪೈಪುಗಳಿಗೆ ಮೋಟಾರ್ ಜೋಡಿಸಿ ನೀರು ಬಳಸಿಕೊಳ್ಳುತ್ತಿವೆ. ಇಂತಹ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ಹೇಳಿದರು.

‘ಹೋಂ ಸ್ಟೇಗಳಿಂದ ನಮ್ಮ ಸಂಸ್ಕೃತಿಯೇ ನಾಶವಾಗುತ್ತಿದೆ. ಸಾಂಸ್ಕೃತಿಕ ಪ್ರವಾಸೋದ್ಯಮ ‘ಹಿಟ್ ಅಂಡ್ ರನ್’ ಸಂಸ್ಕೃತಿಯಾಗಿ ಪರಿವರ್ತನೆಯಾಗುತ್ತಿದೆ. ರಾಜಾಸೀಟು ಉದ್ಯಾನದ ಬಳಿ ದಲ್ಲಾಳಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾರೆ. ಮಡಿಕೇರಿ ಬೆಂಗಳೂರಿನ ಚಿಕ್ಕಪೇಟೆ ಅಥವಾ ಬಳೇಪೇಟೆ ಅಲ್ಲ. ಇಂತಹ ಸಂಸ್ಕೃತಿಯನ್ನು ತಡೆಯಲು ನಾವೆಲ್ಲರೂ ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯರ ಸಲಹೆಗೆ ಸಭೆ ಸಂಪೂರ್ಣ ಸಹಮತ ವ್ಯಕ್ತಪಡಿಸಿತು. ‘ಇದುವರೆಗೆ ನೋಂದಣಿಯಾಗದ ಹೋಂ ಸ್ಟೇಗಳನ್ನು ಗುರುತಿಸಿ ಅವುಗಳಿಗೆ ಪೂರೈಸುವ ಕುಡಿಯುವ ನೀರಿಗೆ ವಾಣಿಜ್ಯ ಕರ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಹೋಂ ಸ್ಟೇಗಳು ವಾಣಿಜ್ಯ ಕರ ಪಾವತಿಸಲು ಒಪ್ಪದಿದ್ದಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವುದರ ಜೊತೆಗೆ, ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲು ‘ಸೆಸ್ಕ್’ಗೆ ಸೂಚಿಸ ಲಾಗುವುದು’ ಎಂದು ಅಧ್ಯಕ್ಷ ಎಚ್.ಎಂ. ನಂದಕುಮಾರ್ ಸಭೆಗೆ ತಿಳಿಸಿದರು.

ಈ ಮಧ್ಯೆ, ಸ್ಥಾವರಗಳಲ್ಲಿ ಕುಡಿಯುವ ನೀರಿನ ಒಳಹರಿವು ಕಡಿಮೆಯಾಗಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವಂತಹ ಸಂಭವ ತಲೆದೋರಬಹುದಾದ ಹಿನ್ನೆಲೆ ಯಲ್ಲಿ ಲಾರಿ ಮೌಂಟೆಡ್ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವುದಕ್ಕೆ ಬಾಡಿಗೆ ದರ ನಿಗದಿಪಡಿಸಲು ಸಭೆ ಒಪ್ಪಿಗೆ ಸೂಚಿಸಿತು. ಸೇವಾ ಶುಲ್ಕ ವಸೂಲಿಗೆ ನಿರ್ಧಾರ: ‘ನಿರ್ಮಲ’ ನಗರ ಯೋಜನೆಯಡಿ ಮನೆ-ಮನೆಗಳಿಂದ ಘನತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿರುವ ಸ್ತ್ರೀಶಕ್ತಿ ಗುಂಪಿಗೆ ಸಾರ್ವಜನಿಕರು ಸಕಾಲದಲ್ಲಿ ಸೇವಾ ಶುಲ್ಕ ಪಾವತಿಸುತ್ತಿಲ್ಲ.
 
ಇದರಿಂದ ನಗರದಲ್ಲಿ ಸರಿಯಾಗಿ ಕಸ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ವಾರ್ಷಿಕ ಆಸ್ತಿ ತೆರಿಗೆ ಅಥವಾ ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಿಸುವ ಸಂದರ್ಭದಲ್ಲಿ ನಗರಸಭೆಯೇ ಘನತ್ಯಾಜ್ಯ ವಸ್ತುಗಳ ವಿಲೇವಾರಿಯ ಸೇವಾ ಶುಲ್ಕ ಸಂಗ್ರಹಿಸಿ, ಆನಂತರ ಸ್ತ್ರೀಶಕ್ತಿ ಗುಂಪಿಗೆ ನೀಡಲು ತೀರ್ಮಾನಿಸಲಾಯಿತು. ಅಲ್ಲದೆ, ಕಸ ಸಂಗ್ರಹಣೆಗೆ 20 ತೊಟ್ಟಿಗಳನ್ನು ನಗರದ ವಿವಿಧೆಡೆ ಹಾಕಲು ನಿರ್ಧರಿಸಲಾಯಿತು.

ಎರಡು ಶಾಲೆ ಹಸ್ತಾಂತರಕ್ಕೆ ತೀರ್ಮಾನ: ದಾನ ಪತ್ರ ನೀಡಿದಂತಹ ಜಿ.ಟಿ. ವೃತ್ತದ ಬಳಿಯ ಶಾಲೆ ಹೊರತುಪಡಿಸಿ ಇನ್ನುಳಿದ ಎರಡು ನಗರಸಭೆ ಶಾಲೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ, ನಿರ್ಮಿತಿ ಕೇಂದ್ರಕ್ಕೆ ಇನ್ನು ಮುಂದೆ ಯಾವುದೇ ಕಾಮಗಾರಿ ನೀಡದಿರಲು ಕೂಡ ಸಭೆ ನಿರ್ಧರಿಸಿತು. ನಗರದಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯಲ್ಲಿ ನಿರ್ಮಿತಿ ಕೇಂದ್ರ ಭಾರಿ ಅವ್ಯವಹಾರ ನಡೆಸಿದೆ. ನಿರ್ಮಿತಿ ಕೇಂದ್ರ 50 ಲಕ್ಷ ರೂಪಾಯಿ ಮೊತ್ತದ ಗುತ್ತಿಗೆ ಪಡೆದು, 12 ಲಕ್ಷ ರೂಪಾಯಿಗಳಿಗೆ ಮತ್ತೊಬ್ಬ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಕಾಮಗಾರಿ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್‌ನ ಅಬ್ದುಲ್ ರಜಾಕ್ ಆರೋಪಿಸಿದರೆ,

ಈ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಟಿ.ಎಂ. ಅಯ್ಯಪ್ಪ ಒತ್ತಾಯಿ ಸಿದರು. ಪಕ್ಷೇತರ ಸದಸ್ಯ ಮುನೀರ್ ಅಹಮದ್ ಕೂಡ ಈ ಅವ್ಯವಹಾರದಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಯೊಬ್ಬರಿಗೆ ಕಮಿಷನ್ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಆದರೆ, ಮುಂದಿನ ದಿನಗಳಲ್ಲಿ ಇಂತಹ ಅವ್ಯವಸ್ಥೆಗಳಿಗೆ ಅವಕಾಶ ನೀಡುವುದಿಲ್ಲ. ಅಲ್ಲದೆ, ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮಗಾರಿಗಳನ್ನು ವಹಿಸುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡುತ್ತೇನೆ.

ಇಲ್ಲಿಗೆ ಚರ್ಚೆಗೆ ಅಂತ್ಯ ಹಾಡಿ ಎಂದು ಅಧ್ಯಕ್ಷ ನಂದಕುಮಾರ್ ಕೋರಿದರು. ಅಧ್ಯಕ್ಷರ ಮಾತಿಗೆ ಸದಸ್ಯರು ಬೆಲೆಕೊಟ್ಟಿದ್ದರಿಂದ ಚರ್ಚೆಗೂ ತೆರೆ ಬಿದ್ದಿತು. ಆಯುಕ್ತರ ಗೈರು: ನಗರಸಭೆ ಪೌರಾಯುಕ್ತ ಕೆ.ಶ್ರೀಕಾಂತರಾವ್ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರು. ಕಾಂಗ್ರೆಸ್ ಸದಸ್ಯ ಚುಮ್ಮಿ ದೇವಯ್ಯ ಆಯುಕ್ತರ ಗೈರು ಹಾಜರಿ ಬಗ್ಗೆ ಸಭೆಯ ಗಮನಸೆಳೆದರು. ಕಳೆದ ಒಂದೂವರೆ ತಿಂಗಳಿಂದ ಆಯುಕ್ತರು ತಮ್ಮ ಕೊಠಡಿಯಲ್ಲಿಯೂ ಸರಿಯಾಗಿ ಕೂರುತ್ತಿಲ್ಲ. ಏನಿದರ ಅರ್ಥ? ಎಂದು ರಜಾಕ್ ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ನಂದಕುಮಾರ್, ಕಾರ್ಯನಿಮಿತ್ತ ಪೌರಾಯುಕ್ತರು ರಜೆ ಮೇಲೆ ಹೊರಗೆ ಹೋಗಿದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಗೆ ತಮ್ಮ ಜವಾಬ್ದಾರಿ ಹೊರಿಸಿದ್ದಾರೆ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ನಗರಸಭೆ ಉಪಾಧ್ಯಕ್ಷೆ ವಸಂತ ಕೇಶವ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾಶೆಟ್ಟಿ ಹಾಗೂ ಇತರ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.