ADVERTISEMENT

ಮತ್ತೆ ಮಳೆ ಬಿರುಸು: ಕೃಷಿಕರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 9:13 IST
Last Updated 12 ಜುಲೈ 2013, 9:13 IST

ಮಡಿಕೇರಿ: ಮಡಿಕೇರಿ, ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಉತ್ತಮವಾಗಿ ಮಳೆ ಸುರಿದಿದೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿ ಹನಿಯುತ್ತಿದ್ದ ಮಳೆ ಸಂಜೆಯ ವೇಳೆಗೆ ತನ್ನ ಆರ್ಭಟವನ್ನು ಹೆಚ್ಚಿಸಿಕೊಂಡಿದೆ.

ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಸೇರಿದಂತೆ ಮತ್ತಿತರ ಪ್ರದೇಶದಲ್ಲಿ ಮಳೆಯ ಆರ್ಭಟ ಗುರುವಾರ ಸಂಜೆ ಹೆಚ್ಚಾಗಿದೆ.

ಮಳೆ ಹಾನಿ:  ಕಳೆದ ಬಾರಿ ಮಳೆಯಿಲ್ಲದೆ ಕಂಗೆಟ್ಟಿದ್ದ ರೈತರು ಈ ಬಾರಿ ಉತ್ತಮ ಮಳೆಯಾದರೂ ಕೂಡ ಪುನಃ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಕುಶಾಲನಗರ, ಸೋಮ ವಾರಪೇಟೆ, ಶನಿವಾರ ಸಂತೆ ಭಾಗಗಳಲ್ಲಿ ಪ್ರಮುಖ ಬೆಳೆಯಾಗಿರುವ ಮೆಕ್ಕೆ ಜೋಳ, ರಾಗಿ, ಆಲೊಗೆಡ್ಡೆ ಸೇರಿದಂತೆ ಮತ್ತಿತರ ಕೃಷಿ ಬೆಳೆಗಳು ಅತಿ ಹೆಚ್ಚಾ ತೇವಾಂಶದಿಂದಾಗಿ ಕೊಳೆಯುವ ಹಂತಕ್ಕೆ ತಲುಪಿವೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಗುರವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ ಕಳೆದ 24 ಗಂಟೆಯ್ಲ್ಲಲಿ 36.01 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 7.95 ಮಿ.ಮೀ. ಮಳೆ ಬಿದ್ದಿತ್ತು. ಜನವರಿಯಿಂದ ಇಲ್ಲಿಯವರೆಗೆ 1404.7 ಮಿ.ಮೀ. ಮಳೆ ದಾಖಲಾ ಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 60.85 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 14.1 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 33.07 ಮಿ.ಮೀ. ಮಳೆ ದಾಖಲಾಗಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 40.6 ಮಿ.ಮೀ., ನಾಪೋಕ್ಲು 41.2 ಮಿ.ಮೀ., ಸಂಪಾಜೆ 57.2 ಮಿ.ಮೀ., ಭಾಗಮಂಡಲ 104.4 ಮಿ.ಮೀ., ವೀರಾಜಪೇಟೆ ಕಸಬಾ 27.2 ಮಿ.ಮೀ., ಹುದಿಕೇರಿ 10.2 ಮಿ.ಮೀ., ಶ್ರಿಮಂಗಲ 14.2 ಮಿ.ಮೀ., ಪೊನ್ನಂಪೇಟೆ 11 ಮಿ.ಮೀ., ಅಮ್ಮತ್ತಿ 17 ಮಿ.ಮೀ., ಸೋಮವಾರಪೇಟೆ ಕಸಬಾ 32 ಮಿ.ಮೀ., ಶನಿವಾರಸಂತೆ 36 ಮಿ.ಮೀ., ಶಾಂತಳ್ಳಿ 74.2 ಮಿ.ಮೀ., ಕೊಡ್ಲಿಪೇಟೆ 27 ಮಿ.ಮೀ., ಕುಶಾಲನಗರ 6.6 ಮಿ.ಮೀ., ಸುಂಟಿಕೊಪ್ಪ 22.6 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.88 ಅಡಿಗಳು, ಕಳೆದ ವರ್ಷ ಇದೇ ದಿನ 2823.00 ಅಡಿ ನೀರು ಸಂಗ್ರಹವಾಗಿತ್ತು. ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 14.4 ಮಿ.ಮೀ. ಮಳೆ ಸುರಿದಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 6238 ಕ್ಯೂಸೆಕ್ ಆಗಿದೆ.
ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 936 ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 5979 ಕ್ಯೂಸೆಕ್, ನಾಲೆಗೆ 675 ಕ್ಯೂಸೆಕ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.