ADVERTISEMENT

ಮದ್ಯವರ್ಜನ ಶಿಬಿರ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:20 IST
Last Updated 11 ಜೂನ್ 2011, 6:20 IST

ಗೋಣಿಕೊಪ್ಪಲು: ಕುಡಿತದ ಚಟ ಬಿಡಿಸಲು ಕಳೆದ ಒಂದು ವಾರದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಆರ್‌ಎಂಸಿ ಆವರಣದಲ್ಲಿ ನಡೆದ ಮದ್ಯವರ್ಜನ ಶಿಬಿರ ಗುರುವಾರ ಮುಕ್ತಾಯ ವಾಯಿತು.

ಕುಡಿತದ ವ್ಯಸನಕ್ಕೆ ಒಳಗಾಗಿದ್ದ ವ್ಯಕ್ತಿಗಳು ಕುಡಿತ ಬಿಡುತ್ತೇನೆ ಎಂದು ಪ್ರಮಾಣ ಮಾಡಿ ಶಿಬಿರದಿಂದ ಒಂದು ವಾರದ ಬಳಿಕ ತಮ್ಮ ಪತ್ನಿಯರೊಂದಿಗೆ ಸಂತೋಷವಾಗಿ ಮನೆಗೆ ತೆರಳಿದರು. ಪತಿಯ ಕಿರುಕುಳಕ್ಕೆ ಒಳಗಾಗಿದ್ದ ಪತ್ನಿಯರು ಕೂಡ ತಮ್ಮ ಗಂಡನ ಬದಲಾವಣೆ ಕಂಡು ಹರುಷದಿಂದ ಗಂಡನ ಜತೆ ತೆರಳಿದರು.

 ಶಿಬಿರ ನಡೆಯುವ ಸಂದರ್ಭದಲ್ಲಿ ಪತ್ನಿಯರು ಕೂಡ ಹಿಂದಿನ ಸಾಲಿನಲ್ಲಿ ತಮ್ಮ ಗಂಡನನ್ನು ಕಾಯ್ದಕೊಂಡು ಕೂರುತ್ತಿದ್ದರು. ಶಿಬಿರಕ್ಕೆ ಆಗಮಿಸಿದ ದಿನದಂದು ಬಾಡಿದ್ದ ಮುಖದಲ್ಲಿದ್ದ ಜನರು ಶಿಬಿರ ಮುಕ್ತಾಯವಾದ ಸಂದರ್ಭದಲ್ಲಿ ಅವರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಪತಿ-ಪತ್ನಿಯರನ್ನು ಜತೆಯಲ್ಲಿ ಕೂರಿಸಿ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಂಡ ಬಳಿಕ ಅವರನ್ನು ಭಾವ ಪೂರ್ಣವಾಗಿ ಬೀಳ್ಕೊಡಲಾಯಿತು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ವಿಶ್ರಾಂತ ಅಧ್ಯಕ್ಷ ಸ್ವಾಮಿ ಜಗದಾತ್ಮಾನಂದಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್‌ಮಾಚಯ್ಯ, ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಡಾ.ಕೆ.ಕೆ.ಶಿವಪ್ಪ ಮಾತನಾಡಿದರು.

ಜಿ.ಪಂ. ಸದಸ್ಯ ಬಿ.ಎನ್.ಪೃಥ್ಯು, ಸೇವಾನಿರತೆ ಅಶ್ವಿನಿ ಹಾಜರಿದ್ದರು. ತಾ.ಪಂ. ಸದಸ್ಯ ಟಾಟು ಮೊಣ್ಣಪ್ಪ  ಸ್ವಾಗತಿಸಿದರು. ಪುಷ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.