ADVERTISEMENT

ಮರೆನಾಡಿನಲ್ಲಿ ಮೇಳೈಸಿದ ಕೊಡವ ಸಾಂಸ್ಕೃತಿಕ ಮೇಳ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:00 IST
Last Updated 8 ಫೆಬ್ರುವರಿ 2011, 10:00 IST

ಗೋಣಿಕೊಪ್ಪಲು: ಶ್ರೀಮಂಗಲ ಸಮೀಪದ ಬಿರುನಾಣಿಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸೋಮವಾರ ಆಯೋಜಿಸಿದ್ದ  ತಾಲ್ಲೂಕು ಮಟ್ಟದ ಕೊಡವ ಸಾಂಸ್ಕೃತಿಕ ಮೇಳ ಗಮನ ಸೆಳೆಯಿತು.ಬಿರುನಾಣಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮೇಳದಲ್ಲಿ ಬೊಳಕಾಟ್, ಉಮ್ಮತ್ತಾಟ್, ಕತ್ತಿಯಾಟ್, ಕೋಲಾಟ್, ಪರೆಯಕಳಿ ಹಾಗೂ ಕೊಡವ ಗೀತೆಗಳು ವಿಜೃಂಭಿಸಿದವು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ  ಪ್ರತಿಭೆಯ ಕಲಾ ಪ್ರದರ್ಶನ ಮೆರೆದರು.

ಬೊಳಕಾಟ್‌ನ ಹಿರಿಯರ ಸ್ಪರ್ಧೆಯಲ್ಲಿ ಕುಂಜೇರಿ ತಂಡ ಪ್ರಥಮ ಹಾಗೂ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಕಿರಿಯರ ವಿಭಾಗದಲ್ಲಿ ಬಾಳೆಲೆ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಹುದಿಕೇರಿ ಜನತಾ ಪ್ರೌಢ ಶಾಲೆ ತಂಡ ದ್ವಿತೀಯ ಸ್ಥಾನ ಪಡೆಯಿತು.

ಕೊಲಾಟದ ಹಿರಿಯರ ಸ್ಪರ್ಧೆಯಲ್ಲಿ ಕುಂಜೇರಿ ತಂಡ ಪ್ರಥಮ, ಗೋಣಿಕೊಪ್ಪಲು ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿತು. ಕಿರಿಯರ ವಿಭಾಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢಶಾಲೆ ತಂಡ ಪ್ರಥಮ, ಬಿರುನಾಣಿ ಸುಜ್ಯೋತಿ ಶಾಲೆ ದ್ವಿತೀಯ ಸ್ಥಾನ ಗಳಿಸಿತು.ಉಮ್ಮತ್ತಾಟ್ ನೃತ್ಯದ ಹಿರಿಯರ ವಿಭಾಗದಲ್ಲಿ ಬಿರುನಾಣಿ ತಂಡ ಪ್ರಥಮ, ಚಟ್ರಂಡ ತಂಡ ದ್ವಿತೀಯ, ಕಿರಿಯರ ವಿಭಾಗದಲ್ಲಿ ಬಾಳೆಲೆ ಪ್ರತಿಭಾ ಶಾಲೆ ಪ್ರಥಮ, ಹುದಿಕೇರಿ ಜನತಾ ಶಾಲೆ ದ್ವಿತೀಯ ಸ್ಥಾನ ಪಡೆಯಿತು.

ಕೊಡವ ಹಾಡು ಸ್ಪರ್ಧೆಯಲ್ಲಿ ಚಟ್ರಂಡ ರಶ್ಮಿ ಅಪ್ಪಣ್ಣ ಪ್ರಥಮ, ಮುತ್ತಣ್ಣ ದ್ವಿತೀಯ, ಕಿರಿಯರ ವಿಭಾಗದಲ್ಲಿ ಚಟ್ರಂಡ ಸುತನ್ ಬೆಳ್ಯಪ್ಪ ಪ್ರಥಮ, ಚಂಗಣಮಾಡ ಪ್ರಿಯ ಪೊನ್ನಮ್ಮ ದ್ವಿತೀಯ ಬಹುಮಾನ ಗಳಿಸಿದರು.

ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ನೆಲ್ಲೆರ ಉಮಾವತಿ, ಅಣ್ಣಳಮಾಡ ಪುಷ್ಪ, ನೆಲ್ಲೆರ ಜ್ಯೋತಿ ಸೂರಜ್ ಬಹುಮಾನ ಗಳಿಸಿದರು. ಕತ್ತಿಯಾಟ್ ಹಿರಿಯರ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಪ್ರಥಮ, ಹುದಿಕೇರಿ ಜನತಾ ಪ್ರೌಢ ಶಾಲೆ ದ್ವಿತೀಯ  ಸ್ಥಾನ ಪಡೆಯಿತು. ಕಿರಿಯರ ವಿಭಾಗದಲ್ಲಿ ಬಾಳೆಲೆ ಪ್ರತಿಭಾ ಶಾಲೆ ಪ್ರಥಮ, ಬಿರುನಾಣಿ ಸುಜ್ಯೋತಿ ಶಾಲೆ ದ್ವಿತೀಯ ಸ್ಥಾನ ಗಳಿಸಿತು.

ಸ್ಪರ್ಧೆಯನ್ನು ತೆರಾಲು ಗ್ರಾಮದ ಲೇಖಕಿ ಮುಲ್ಲೆಂಗಡ ಪುಷ್ಪ ಮುತ್ತಣ್ಣ ಉದ್ಘಾಟಿಸಿದರು. ಬಿರುನಾಣಿ ಕೊಡವ  ಸಮಜಾದ ಅಧ್ಯಕ್ಷ  ನೆಲ್ಲಿರ ಕುಟ್ಟಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮರೆನಾಡ್ ಕೊಡವ ಸಂಘದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ, ಮರೆನಾಡ್ ಪ್ರೌಢಶಾಲೆ ಅಧ್ಯಕ್ಷೆ ರೇವತಿ ಪರಮೇಶ್ವರ್, ಮಹಿಳಾ ಸಮಾಜದ ಅಧ್ಯಕ್ಷೆ ಕಮಲಾ ಮಾದಪ್ಪ, ಕಾಫಿ  ಬೆಳೆಗಾರ ಬೊಳ್ಳೆರ ಕೆ.ಪೊನ್ನಪ್ಪ ಹಾಜರಿದ್ದರು. ಮುಲ್ಲೆಂಗಡ ಮಧೋಶ್ ಪೂವಯ್ಯ,  ಅಜ್ಜಿನಿಕಂಡ ಮಹೇಶ್  ನಾಚಯ್ಯ ಪ್ರಬಂಧ ಮಂಡಿಸಿದರು.

ನೆಲ್ಲಮಕ್ಕಡ ಸಾಗರ್ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯೆ ಬಾಚರಣಿಯಂಡ ರಾಣು ಅಪ್ಪಣ್ಣ  ಸ್ವಾಗತಿಸಿದರು. ಸದಸ್ಯ ಪಡಿಂಞಿರಂಡ ಪ್ರಭುಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.