ADVERTISEMENT

ಮಳೆ ಕೊರತೆ; ವಿದ್ಯುತ್‌ ಉತ್ಪಾದನೆಗೆ ಹಿನ್ನಡೆ

ಹಾರಂಗಿ ಜಲಾಶಯದ ನೀರು ಬಳಸಿಕೊಳ್ಳುವ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ

ರಘು ಹೆಬ್ಬಾಲೆ
Published 17 ಜುಲೈ 2017, 7:01 IST
Last Updated 17 ಜುಲೈ 2017, 7:01 IST
ಹಾರಂಗಿ ಜಲಾಶಯದ ಬಳಿ ಇರುವ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ
ಹಾರಂಗಿ ಜಲಾಶಯದ ಬಳಿ ಇರುವ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ   

ಕುಶಾಲನಗರ: ಜಿಲ್ಲೆಯಲ್ಲಿ ಮುಂಗಾರು ದುರ್ಬಲಗೊಂಡಿದ್ದು ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಕೊರತೆಯಾಗಿದೆ. ಇದರಿಂದಾಗಿ ಜಲಾಶಯದ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ (ಇಡಿಸಿಎಲ್)ಸ್ಥಾಪಿಸಿರುವ ಜಲವಿದ್ಯುತ್ ಘಟಕದಲ್ಲಿ ಈ ಬಾರಿ ಉದ್ದೇಶಿತ ಜಲ ವಿದ್ಯುತ್ ಉತ್ಪಾದನಗೆ ತೀವ್ರ ಹಿನ್ನಡೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.

ಇದರಿಂದ ಕೊಡಗಿನಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗ್ರಾಮೀಣ ಪ್ರದೇಶಗಳಿಗೂ ಇದರ ಬಿಸಿ ತಟ್ಟಲಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆ ದಾಖಲಾಗಿದ್ದು, ಗಣನೀಯ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರದ ಕಾರಣ ಈ ವರ್ಷ ಜಲವಿದ್ಯುತ್ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಸ್ಥಿತಿ ಎದುರಾಗಿದೆ.

ADVERTISEMENT

ಜಲಾಶಯದ ಗರಿಷ್ಠ ಮಟ್ಟವು 2,859 ಅಡಿ ಆಗಿದ್ದು ಶನಿವಾರ 2836.75 ಅಡಿ ನೀರು ಸಂಗ್ರಹವಿತ್ತು. 3.86 ಟಿಎಂಸಿಯಷ್ಟು ನೀರು ಸಂಗ್ರಹ ವಿದೆ. 1,288 ಕ್ಯುಸೆಕ್‌ ಒಳಹರಿವು ಇದೆ.

ಕಳೆದ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 2,857.30 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, 3,020 ಕ್ಯುಸೆಕ್‌ ಒಳಹರಿವು ಇತ್ತು. 7.92 ಟಿಎಂಸಿ ನೀರು ಸಂಗ್ರಹಗೊಂಡಿತ್ತು.

ಜಲಾಶಯದಿಂದ ಎಡದಂಡೆ ಕಾಲುವೆಗಳಿಗೆ ಹರಿಸುವ ನೀರನ್ನೇ ವಿದ್ಯುತ್ ಉತ್ಪಾದಿಸಲು ಇಡಿಸಿಎಲ್ ವಿದ್ಯುತ್ ಘಟಕ ಆವಲಂಬಿಸಿದೆ.

ಇಡಿಸಿಎಲ್ ಘಟಕದ ವತಿಯಿಂದ 30 ಸಾವಿರ ಮಿಲಿಯನ್ ಯೂನಿಟ್‌ನಷ್ಟು ವಿದ್ಯುತ್ ಉತ್ಪಾದನಾ ಗುರಿ ಹೊಂದಲಾಗಿತ್ತು. ಆದರೆ, ಈ ವರ್ಷ ಮುಂಗಾರು ಕೈಕೊಟ್ಟಿರುವು ದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಕಷ್ಟ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಡಿಸೆಂಬರ್ ಮಧ್ಯಭಾಗದ ತನಕ ಅಂದರೆ ಕೇವಲ 5 ತಿಂಗಳು ಮಾತ್ರ ಇಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಈ ವರ್ಷ ಜೂನ್ ತಿಂಗಳು ಮುಗಿದು ಜುಲೈ ಎರಡನೇ ವಾರ ಕಳೆದರೂ ವಾಡಿಕೆ ಮಳೆಯಾಗದೆ ಮಳೆರಾಯ ಕೈಕೊಟ್ಟಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿಲ್ಲ. ಈ ಬಾರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೂಡ ಇಳಿಮುಖವಾಗುವ ಲಕ್ಷಣ ಕಂಡುಬಂದಿದೆ.

ಪ್ರತಿ ವರ್ಷ 8 ಟಿಎಂಸಿ ನೀರು ಸಂಗ್ರಹಗೊಂಡ ನಂತರವೇ ಕಾಲುವೆಗಳಿಗೆ ನೀರು ಹರಿಸಲಾಗತ್ತಿದೆ. ಆದರೆ, ಈ ವರ್ಷ 3.8 ಟಿ.ಎಂ.ಸಿ.ನೀರು ಮಾತ್ರ ಸಂಗ್ರಹ ವಿರುವ ಕಾರಣ ಕಾಲುವೆಗಳಿಗೆ ನೀರು ಹರಿಸುವುದು ಕಷ್ಟ ಸಾಧ್ಯವಾಗಲಿದೆ ಎಂದು ಅಣೆಕಟ್ಟು ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ಮುಂಗಾರು ಇನ್ನೊಂದು ವಾರದಲ್ಲಿ ಬಿರುಸುಗೊಳ್ಳದಿದ್ದರೆ ಈ ಬಾರಿ ವಿದ್ಯುತ್ ಉತ್ಪಾದನೆಗೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಇಡಿಸಿಎಲ್ ಘಟಕದ ವ್ಯವಸ್ಥಾಪಕ ಶಿವ ಸುಬ್ರಮಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.