ADVERTISEMENT

ಮಳೆ ರಭಸಕ್ಕೆ ಕಟ್ಟಡದ ಬರೆ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:39 IST
Last Updated 13 ಜೂನ್ 2018, 11:39 IST

ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗಾಗಿ ಬರೆ ಕೊರೆದು ಸಮತಟ್ಟು ಮಾಡಲಾಗಿದ್ದು, ನಿರಂತರ ಸುರಿಯುತ್ತಿರುವ ಗಾಳಿ, ಮಳೆಗೆ ಉಳಿಕೆ ಬರೆ ಕುಸಿದು ಬಿದ್ದಿದೆ. ಇದರಿಂದ, ಕಟ್ಟಡಕ್ಕೆ ಯಾವ ಸಮಯದಲ್ಲಾದರೂ ಅಪಾಯ ಉಂಟಾಗುವ ಸೂಚನೆ ಕಂಡುಬಂದಿದೆ.

ಹೆಚ್ಚುವರಿ ಕೊಠಡಿ ಅವಶ್ಯಕತೆ ಗೆಂದು ಜಾಗ ಸಮತಟ್ಟು ಮಾಡಲು ಬರೆಯನ್ನು ಕೊರೆಯಲಾಗಿದೆ. ಅಲ್ಲಿ ಉಳಿದ ಆ ಭಾಗದಲ್ಲಿ ಮಳೆಯ ಆರ್ಭಟ ದಿಂದ ಮಣ್ಣು ಮೃದುಗೊಂಡು ಮತ್ತೆ ಬರೆ ಕುಸಿಯಲಾರಂಭಿಸಿದೆ. ಇದರಿಂದ ಪಾಠ ನಡೆಯುತ್ತಿರುವ ತರಗತಿ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದ್ದು ಆತಂಕವಾಗಿದೆ.

ಮತ್ತೊಂದೆಡೆ ಕಾಲೇಜಿನ ಪಕ್ಕದಲ್ಲಿ ರುವ ಅಂಗನವಾಡಿಗೆ ತೆರಳುವ ದಾರಿಯ ಬರೆಯೂ ಮಳೆಗೆ ಕುಸಿದಿದೆ. ಅಂಗನವಾಡಿ ಕಟ್ಟಡದ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ಜಾಗ ಸಮತಟ್ಟು ಮಾಡುವ ಭರದಲ್ಲಿ ಅಂಗನವಾಡಿಯ ಸಮೀಪದ ಬರೆಯನ್ನು ಕೊರೆಯಲಾಗಿದೆ. ಇದರಿಂದ ಅಂಗನವಾಡಿಯ ದಾರಿ ಕುಸಿಯುತ್ತಿರುವುದು ಭಯವನ್ನುಂಟು ಮಾಡಿದೆ.

ADVERTISEMENT

‘ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ₹10 ಲಕ್ಷ ಹಾಗೂ ಎಂಎಲ್‌ಸಿ ಸುನೀಲ್ ಸುಬ್ರಮಣಿ ₹2 ಲಕ್ಷ ಅನುದಾನವನ್ನು ಕಾಲೇಜಿಗೆ ಬಿಡುಗಡೆ ಮಾಡಲು ಈ ಹಿಂದೆ ಒಪ್ಪಿದ್ದು, ಕ್ರಿಯಾ ಯೋಜನೆ ತಯಾರಿಸಿ ಅಂಗನವಾಡಿ ತಡೆಗೋಡೆಯನ್ನು ಮಾಡಲಾಗುತ್ತಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ ತಿಳಿಸಿದರು. ಬರೆ ಕುಸಿತದ ಪರಿಣಾಮ ಅಲ್ಲೇ ಸಮೀಪದ ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು ಯಾವ ಸಂದರ್ಭದಲ್ಲಾದರೂ ಬೀಳುವ ಸ್ಥಿತಿ ಇದೆ.

ಕೂಡಲೇ ಜನಪ್ರತಿನಿಧಿಗಳು ಇತ್ತ ಗಮನ ನೀಡಿ ಮುಂದಾಗುವ ಅವಘಡ ತಪ್ಪಿಸುವ ಕ್ರಮವನ್ನು ಕೈಗೊಳ್ಳಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳು, ಪ್ರಭಾರ ಪ್ರಾಚಾರ್ಯ ಸೋಮಚಂದ್ರ ಹಾಗೂ ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.