ADVERTISEMENT

`ಮಾದಂಡ ಕಪ್- 2013'ಕ್ಕೆ ಅದ್ದೂರಿ ಚಾಲನೆ

ಕೊಡವರ ನಾಡಲ್ಲಿ ಮೈ ನವಿರೇಳಿಸಿದ ಹಾಕಿ ಪಂದ್ಯಾವಳಿ, ತಂಡೋಪ ತಂಡವಾಗಿ ಸೇರಿದ ಕ್ರೀಡಾ ಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 9:15 IST
Last Updated 15 ಏಪ್ರಿಲ್ 2013, 9:15 IST

ಮಡಿಕೇರಿ: ವಿರಾಜಪೇಟೆ ಬಳಿಯ ಬಾಳುಗೋಡಿನ ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದ ಆವರಣದಲ್ಲಿ ಭಾನುವಾರ ಕೊಡವ ಕುಟುಂಬಗಳ ನಡುವಿನ 17ನೇ ವರ್ಷದ ಹಾಕಿ ಉತ್ಸವ `ಮಾದಂಡ ಕಪ್- 2013'ಕ್ಕೆ ಚಾಲನೆ ನೀಡಲಾಯಿತು.

ಕೊಡವ ಹಾಕಿ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪಾಂಡಂಡ ಎಂ. ಕುಟ್ಟಪ್ಪ ಅವರು ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಚೆಂಡನ್ನು ಬಾರಿಸುವ ಮೂಲಕ ಹಾಕಿ ಉತ್ಸವಕ್ಕೆ ಚಾಲನೆ ನೀಡಿದರು.

ಕ್ರೀಡಾಸಕ್ತಿಗೆ ಸಹಕಾರಿ: ಅಂತರರಾಷ್ಟ್ರೀಯ ಮಟ್ಟದ ಹಾಕಿ ಆಟಗಾರರು ಕೊಡವ ಕುಟುಂಬಗಳ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಇಲ್ಲಿನ ಯುವ ಜನತೆಯಲ್ಲಿ ಇನ್ನಷ್ಟು ಕ್ರೀಡಾಸಕ್ತಿ ಹೆಚ್ಚಾಗಲು ಸಹಾಯಕವಾಗಿದೆ ಎಂದು ಕೊಡವ ಹಾಕಿ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪಾಂಡಂಡ ಎಂ. ಕುಟ್ಟಪ್ಪ  ಅಭಿಪ್ರಾಯಪಟ್ಟರು.

ಹಾಕಿ ಉತ್ಸವದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡವ ಕುಟುಂಬಗಳ ನಡುವೆ ನಡೆಯುವ ಈ ಕ್ರೀಡಾ ಕೂಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದಾಗಿ ಉತ್ತಮ ಕ್ರೀಡಾಂಗಣ ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಈ ಪಂದ್ಯಾಟ ಇನ್ನೂ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಅವರು ಹಾರೈಸಿದರು.

ಬಾಳುಗೋಡಿನ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಎಂ.ಎನ್. ಬೆಳ್ಳಿಯಪ್ಪ ಮಾತನಾಡಿ, ಈ ಪಂದ್ಯಾಟ ನಡೆಸುವುದರಿಂದಾಗಿ ಕೊಡವ ಸಮುದಾಯದ ಸಂಸ್ಕೃತಿಯ ಬೆಳವಣಿಗೆಯ ಜೊತೆಗೆ ಜನಾಂಗದ ಎಲ್ಲರೂ ಒಂದೆಡೆ ಸೇರುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ಸಾಂಸ್ಕೃತಿಕ ಸಮುಚ್ಛಯ ಮತ್ತು ಕ್ರೀಡಾಂಗಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸರ್ಕಾರ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಬೇರೆಡೆ ತೆರಳಿರುವ ಕೊಡವ ಸಮಾಜದ ಎಲ್ಲಾ ಬಾಂಧವರು ಒಂದೆಡೆ ಸೇರಲು ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಹೇಳಿದರು.

ಕರ್ನಾಟಕ ಹಾಕಿ ಕಾರ್ಯದರ್ಶಿ ಡಾ.ಎ.ಬಿ. ಸುಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರಾದ ಜೆ. ಎಂ. ಅಪ್ಪಚ್ಚು, ಸಮಿತಿ ಅಧ್ಯಕ್ಷ ಮಾದಂಡ ಬಿ. ಮಿಟ್ಟು ಉತ್ತಪ್ಪ ಮತ್ತಿತರರು ಹಾಜರಿದ್ದರು.

ಮಾದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಎಂ.ಎಸ್. ಪೂವಯ್ಯ ಸ್ವಾಗತಿಸಿದರು. ಪದಾಧಿಕಾರಿಗಳಾದ ಶ್ರೀನಿವಾಸ್, ಚಪ್ಪುಡಿರ ಕಾರ್ಯಪ್ಪ ನಿರೂಪಿಸಿದರು.

ಮನಸೂರೆಗೊಂಡ ಕೊಡವ ನೃತ್ಯ
ಸಭಾ ಕಾರ್ಯಕ್ರಮದ ನಡುವೆ ಪೊನ್ನಂಪೇಟೆ ನಿನಾದ ಸಂಸ್ಥೆ ಮತ್ತು ಇತರೆ ಒಕ್ಕೂಟದ ಪದಾಧಿಕಾರಿಗಳು ಕೊಡವ ನೃತ್ಯ ಪ್ರದರ್ಶನ ಎಲ್ಲರನ್ನು ರಂಜಿಸಿತು. ಬಿಸಿಲ ಬೇಗೆಯಲ್ಲಿ ಮಂಕಾಗಿ ಕುಳಿತಿದ್ದ ವೀಕ್ಷಕರು ನೃತ್ಯ ಪ್ರದರ್ಶನ ಆರಂಭ ವಾದೊಡನೆ ಸಿಳ್ಳೆ, ಚಪ್ಪಾಳೆಗಳೊಂದಿಗೆ ಪ್ರೋತ್ಸಾಹ ನೀಡುತ್ತಿದ್ದರು.

ವಾದ್ಯಗೋಷ್ಠಿಯೊಂದಿಗೆ ಸ್ವಾಗತ
ಸಭಾ ಕಾರ್ಯಮ ಮುಗಿದ ಬಳಿಕ ಪಂಜಾಬ್ ಎಲೆವೆನ್ ಹಾಗೂ ಕೊಡಗು ಹಾಕಿ ಎಲೆವೆನ್ ತಂಡದ ಸದಸ್ಯರನ್ನು ಸಾಂಸ್ಕೃತಿಯ ಪ್ರತೀಕವಾದ ವಾದ್ಯ ಗೋಷ್ಠಿಗಳೊಂದಿಗೆ ಬರಮಾಡಿಕೊಳ್ಳ ಲಾಯಿತು. ಈ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವೀಕ್ಷಕರು ಸುಡು ಬಿಸಿಲಿನಲ್ಲಿಯೂ ಕ್ರೀಡಾಪಟು ಗಳನ್ನು ಚಪ್ಪಾಳೆಗಳೊಂದಿಗೆ ಸ್ವಾಗತಿಸಿದರು.

ರಸದೌತಣ ನೀಡಿದ ಪಂದ್ಯ
ಪಂದ್ಯಾವಳಿ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದ ವೀಕ್ಷಕರು ಆಟಕ್ಕೆ ಸಜ್ಜುಗೊಳ್ಳುತಿದ್ದ ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಸುಮಾರು 11.30ರ ವೇಳೆಗೆ ಆರಂಭವಾದ ಪಂದ್ಯ ಬಿಸಿಲಿನ ಬೇಗೆ ಹೆಚ್ಚಾದಂತೆ ಪ್ರೇಕ್ಷಕರಲ್ಲಿಯೂ ಆಸಕ್ತಿ ಹೆಚ್ಚಾಗುತ್ತಿದದ್ದು ಕಂಡು ಬಂದಿತ್ತು.

ಪಂದ್ಯಾಟದ ಮೊದಲ ಭಾಗದಲ್ಲಿ ಯಾವುದೇ ಗೋಲ್ ಬರಲಿಲ್ಲ. ದ್ವಿತೀಯಾರ್ಧ ಆರಂಭವಾದ ಬಳಿಕ ಪಂಜಾಬ್ ತಂಡದ ಹರ್‌ಪ್ರೀತ್ ಅವರು (31ನೇ ನಿಮಿಷ) ಗೋಲ್ ಬಾರಿಸಿದರು.

ಈ ಸಂದರ್ಭ ಕೊಡವ ತಂಡವನ್ನು ಎಲ್ಲಾ ವೀಕ್ಷಕರು ಬೆಂಬಲಿಸುತ್ತಿದ್ದರು, 59ನೇ ನಿಮಿಷಕ್ಕೆ ಮುತ್ತಣ್ಣ ಅವರು ಗೋಲ್ ಬಾರಿಸುವ ಮೂಲಕ ಎರಡು ತಂಡಗಳು ಸಮ ಬಲ ಸಾಧಿಸಿದವು.

ಪಂದ್ಯಾಟದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರದರ್ಶನ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮಾದಂಡ ಹಾಕಿ ಉತ್ಸವ ಸಮಿತಿಯ ವತಿಯಿಂದ ಸ್ಮರಣೆ ಕಾಣಿಕೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.