ADVERTISEMENT

ಮಾರ್ಚ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 5:50 IST
Last Updated 15 ಫೆಬ್ರುವರಿ 2012, 5:50 IST

ಮಡಿಕೇರಿ: ನಿಗದಿಪಡಿಸಲಾಗಿರುವ ಎಲ್ಲ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ಮಡಿಕೇರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಹೊಸಮನೆ ಸೂಚನೆ ನೀಡಿದರು.

ನಗರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ವಾಪಸ್ ಹೋಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಪ್ಪು ಅಂಕಿ-ಅಂಶ
ವಿವಿಧ ಇಖೆಗಳ ಹಲವು ಅಧಿಕಾರಿಗಳು ಸಭೆಗೆ ನೀಡಿದ ವರದಿಯಲ್ಲಿ ಹಲವಾರು ತಪ್ಪುಗಳು ಕಂಡುಬಂದವು. ಅಂಕಿ-ಅಂಶಗಳ ಲೆಕ್ಕದಲ್ಲಿಯೂ ಏರುಪೇರಾಗಿರುವುದು ಕಂಡುಬಂದಿತು.

ಇದರಿಂದ ಕೆರಳಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ, ಈ ರೀತಿ ಅಧಿಕಾರಿಗಳು ತಪ್ಪು ಮಾಹಿತಿಯನ್ನು ಸಭೆಗೆ ನೀಡಬಾರದು. ಸಭೆಗೆ ಬರುವ ಮೊದಲೇ ಸಂಪೂರ್ಣವಾಗಿ ಸಿದ್ಧರಾಗಿ ಬರಬೇಕು ಎಂದು ಎಚ್ಚರಿಕೆ ನೀಡಿದರು.

ಅಧ್ಯಕ್ಷೆ ಕವಿತಾ ಹೊಸಮನೆ ಮಾನಾಡಿ, ಕಾಟಾಚಾರಕ್ಕಾಗಿ ಸಭೆಗೆ ಬರುವುದು ಬೇಡ ಎಂದು ತಾಕೀತು ಮಾಡಿದರು.

ಹಲವು ಇಲಾಖೆಗಳ ಅಧಿಕಾರಿಗಳು ಅನುಪಾಲನಾ ವರದಿ ನೀಡಿರಲಿಲ್ಲ. ಇದಲ್ಲದೇ, ಕನ್ನಡ ಅನುಷ್ಠಾನದ ಬಗ್ಗೆಯೂ ವರದಿ ನೀಡಿರಲಿಲ್ಲ.

ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ:
ಕರಿಕೆಯ ವಿಎಸ್‌ಎಸ್‌ಎನ್ ಸ್ವಾಮ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಂದ ಪ್ರತಿ ಪದಾರ್ಥಗಳ ಮೇಲೆ ಸಾಗಾಟದ ವೆಚ್ಚವೆಂದು ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಸಾಬೀತಾಗಿದ್ದು, ಈ ಬಗ್ಗೆ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ಸಲ್ಲಿಸುವುದಾಗಿ ಆಹಾರ ಇಲಾಖೆಯ ಆಹಾರ ಶಿರಸ್ತೇದಾರ ಕೆ.ಕೆ. ಕೃಷ್ಣಮೂರ್ತಿ ತಿಳಿಸಿದರು.

ವಿಷಯ ಪ್ರಸ್ತಾಪಿಸಿದ ಅಧ್ಯಕ್ಷೆ ಕವಿತಾ ಹೊಸಮನೆ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಕರಿಕೆ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳೀಯರ ಅಭಿಪ್ರಾಯ ಪಡೆಯಲಾಗಿದೆ. ಪಡಿತರ ವಸ್ತುಗಳಿಗೆ ದುಬಾರಿ ದರ ವಸೂಲು ಮಾಡುತ್ತಿರುವುದು ದೃಢಪಟ್ಟಿದೆ. ಈ ಬಗ್ಗೆ ಆಹಾರ ಉಪ ನಿರ್ದೇಶಕರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ವಿಎಸ್‌ಎಸ್‌ಎನ್ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ ಅಧ್ಯಕ್ಷೆ ಕವಿತಾ ಪ್ರಭಾಕರ್, ಈ ಮಳಿಗೆಯ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.

ಗ್ರಾಹಕರಿಗೆ ತೊಂದರೆ ಕೊಡಬೇಕೆನ್ನುವ ಯಾವ ಉದ್ದೇಶ ನನಗಿಲ್ಲ. ಈಗಾಗಲೇ ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ. ರಾಜೀವ್‌ಗಾಂಧಿ ವಿದ್ಯುದ್ದೀಕರಣ ಯೋಜನೆಯಾಗಲಿ, ವಸತಿ ಯೋಜನೆಯ ಅನುಕೂಲವಾಗಲಿ ದೊರೆಯುತ್ತಿಲ್ಲ. ಹೀಗಿರುವಾಗ ಸಿಗುವ ಅಲ್ಪಸ್ವಲ್ಪ ಪಡಿತರವೂ ದುಬಾರಿಯಾತೆಂದು ಹೇಳಿದರೆ, ಇದಕ್ಕೆ ಏನನ್ನೋಣ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳೇ ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂಡಂಡ ಪ್ರತೀಜಾ ಅಚ್ಚಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.