ADVERTISEMENT

ಮುಂಗಾರು ಹನಿಗೆ ಅರಳಿದ ಕೊಡಗು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:05 IST
Last Updated 3 ಜೂನ್ 2011, 6:05 IST

ಮಡಿಕೇರಿ: ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಕೊಡಗು ಜಿಲ್ಲೆಯನ್ನು ಪ್ರವೇಶಿಸಿದೆ. ಇದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಹರ್ಷಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕುಡಿಯುವ ನೀರಿನ ಬವಣೆಗೂ ಮಳೆ ಪರಿಹಾರ ತಂದಿದೆ. ಈಗಾಗಲೇ ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯ ಮುನ್ಸೂಚನೆಯನ್ನು ನೀಡಿದೆ. ಈವರೆಗಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣವೂ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗಳನ್ನು ನಿರಾಂತಕವಾಗಿ ಮುಂದುವರೆಸಲು ರೈತಾಪಿ ವರ್ಗ ಸಜ್ಜಾಗುತ್ತಿದೆ.

ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದವರೆಗೆ ಸರಾಸರಿ 255.10 ಮಿ.ಮೀ.ನಷ್ಟು ಮಳೆಯಾಗಿದೆ. 2010ರ ಇದೇ ಅವಧಿಯಲ್ಲಿ ಸರಾಸರಿ 203.44ರಷ್ಟು, 2009ರ ಇದೇ ಅವಧಿಯಲ್ಲಿ 245.17 ಮಿ.ಮೀ ಮಳೆಯಾಗಿತ್ತು.
ಇದೇ ರೀತಿ ಮಡಿಕೇರಿ ತಾಲ್ಲೂಕಿನಲ್ಲಿ ಮೇ ಅಂತ್ಯದವರೆಗೆ 316.35 ಮಿ.ಮೀ. ಮಳೆಯಾಗಿದೆ. 2010ರ ಇದೇ ಅವಧಿಯಲ್ಲಿ 272.69 ಮಿ.ಮೀ., 2009ರ ಇದೇ ಅವಧಿಯಲ್ಲಿ 347.71 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಮೇ ಅಂತ್ಯದವರೆಗೆ ಸರಾಸರಿ 247.30 ಮಿ.ಮೀ. ಮಳೆಯಾಗಿದೆ. 2010ರ ಇದೇ ಅವಧಿಯಲ್ಲಿ 159.34 ಮಿ.ಮೀ., 2009ರ ಇದೇ ಅವಧಿಯಲ್ಲಿ 255.79 ಮಿ.ಮೀ. ಮಳೆ ಸುರಿದಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೇ ಅಂತ್ಯದವರೆಗೆ 201.66 ಮಿ.ಮೀ. ಮಳೆಯಾಗಿದೆ. 2010ರ ಇದೇ ಅವಧಿಯಲ್ಲಿ    178.28ಮಿ.ಮೀ.,  2009ರ ಇದೇ ಅವಧಿಯಲ್ಲಿ 132.04ಮಿ.ಮೀ. ಮಳೆಯಾಗಿತ್ತು.

ಮಳೆಯ ವಿವರ: ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 12.84 ಮಿ.ಮೀ. ಆಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 18.95 ಮಿ.ಮೀ. ಮಳೆ ಸುರಿದಿದೆ.  ವಿರಾಜಪೇಟೆ ತಾಲ್ಲೂಕಿನಲ್ಲಿ 16.03 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 3.55 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 5.40 ಮಿ.ಮೀ, ನಾಪೋಕ್ಲು 28.80 ಮಿ.ಮೀ, ಸಂಪಾಜೆ 36.60 ಮಿ.ಮೀ, ಭಾಗಮಂಡಲ 5 ಮಿ.ಮೀ, ವಿರಾಜಪೇಟೆ ಕಸಬಾ 17.60 ಮಿ.ಮೀ, ಹುದಿಕೇರಿ 27.50 ಮಿ.ಮೀ, ಶ್ರೀಮಂಗಲ 27 ಮಿ.ಮೀ, ಪೊನ್ನಂಪೇಟೆ 10 ಮಿ.ಮೀ, ಅಮ್ಮತ್ತಿ 9.10 ಮಿ.ಮೀ, ಬಾಳಲೆ 5 ಮಿ.ಮೀ, ಸೋಮವಾರಪೇಟೆ ಕಸಬಾ 1.40 ಮಿ.ಮೀ, ಶನಿವಾರಸಂತೆ 2 ಮಿ.ಮೀ, ಕೊಡ್ಲಿಪೇಟೆ 15.50 ಮಿ.ಮೀ ಹಾಗೂ ಸುಂಟಿಕೊಪ್ಪದಲ್ಲಿ 2.40 ಮಿ.ಮೀ ಮಳೆಯಾಗಿದೆ.

ಕರಾವಳಿಯಿುಂದ ಮುಂಗಾರು ಪ್ರವೇಶ
ವಿರಾಜಪೇಟೆ: ದಕ್ಷಿಣ ಕೊಡಗಿಗೆ ಬುಧವಾರ ಮಧ್ಯರಾತ್ರಿಯಿಂದಲೇ ಮುಂಗಾರು ಮಳೆ ಪ್ರವೇಶಿಸಿದ್ದು ಗುರುವಾರವೂ ಬೆಳಗಿನಿಂದಲೇ ನಿರಂತರವಾಗಿ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಮೇ ತಿಂಗಳ ಅಂತ್ಯದಲ್ಲಿಯೇ ಮುಂಗಾರು ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ಕೃಷಿಕರು ನಿಗದಿತ ಸಮಯದಲ್ಲಿ ಮಳೆ ಆರಂಭಗೊಂಡಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ಮಾರ್ಚ್ ತಿಂಗಳಿಂದ ಜೂನ್2ರವರೆಗೆ ಒಟ್ಟು 185ಮಿ. ಮೀ(7.2ಇಂಚುಗಳು) ಮಳೆ ಸುರಿದಿದೆ. 2011ರ ಮಾರ್ಚ್ ತಿಂಗಳಿಂದ ಜೂನ್2ರವರೆಗೆ ಒಟ್ಟು 245ಮಿ.ಮೀ (9.6 ಇಂಚುಗಳಷ್ಟು) ಮಳೆ ಸುರಿದಿದ್ದು ಕಳೆದ ಬಾರಿಗಿಂತ ಈ ಬಾರಿ 60.4ಮಿ.ಮೀ (2.4 ಇಂಚುಗಳು) ಅಧಿಕ ಮಳೆಯಾಗಿದೆ. 

ಕೊಡಗಿಗೆ ಮುಂಗಾರು ಪ್ರವೇಶಿಸಿದಂತೆ ಬುಧವಾರ ರಾತ್ರಿ ಸುರಿದ ಮಳೆಗೆ ಸಮೀಪದ ಮಲ್ಲಂಬಟ್ಟಿ ಗ್ರಾಮದ ಅಂಗಡಿಯ ಬಳಿ ಭಾರೀ ಮರ ರಸ್ತೆಗೆ ಅಡ್ಡಲಾಗಿ ಬಿದ್ದುದರಿಂದ ಗುರುವಾರ 5ಗಂಟೆಗಳ ಕಾಲ ಮಡಿಕೇರಿ ವಿರಾಜಪೇಟೆ ನೇರ ರಸ್ತೆ ಸಂಪರ್ಕ ಬಂದ್ ಆಗಿತ್ತು. ಬಸ್ಸುಗಳು ಬಳಸು ದಾರಿಯಲ್ಲಿ ಸಂಚರಿಸುತ್ತಿದ್ದುದರಿಂದ ಕದನೂರು, ಮೈತಾಡಿ, ಅರಮೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಶಾಲೆ ಹಾಗೂ ಕಚೇರಿಗಳಿಗೆ ತೆರಳುವ ಉದ್ಯೋಗಸ್ಥರಿಗೆ ತೊಂದರೆ ಆಯಿತು. ಇಲ್ಲಿನ ಲೋಕೋಪಯೋಗಿ ಇಲಾಖೆ ರಸ್ತೆಯಿಂದ ಮರ ತೆಗೆಯಲು ಹರ ಸಾಹಸ ಪಡಬೇಕಾಯಿತು.  ಮೆಮನಕೊಲ್ಲಿ, ವಾಟೆಕೊಲ್ಲಿ ಹಾಗೂ ಮಾಕುಟ್ಟದಲ್ಲಿಯೂ ಮಂಗಳವಾರದಿಂದಲೇ ನಿರಂತರ ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT