ADVERTISEMENT

ಮುಗಿಯದ ಪ್ರಯಾಣಿಕರ ಗೋಳು

ಆಮೆಗತಿಯಲ್ಲಿ ಹುಣಸೂರು- ಆನೆಚೌಕೂರು ರಸ್ತೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಮೇ 2013, 6:43 IST
Last Updated 28 ಮೇ 2013, 6:43 IST

ಗೋಣಿಕೊಪ್ಪಲು: ಹುಣಸೂರು ಆನೆ ಚೌಕೂರು ರಸ್ತೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದ್ದು, ಪ್ರಯಾಣಿಕರ ಗೋಳು ತೀರದಾಗಿದೆ.

ಹುಣಸೂರು ಆನೆ ಚೌಕೂರು ರಸ್ತೆ ಕಾಮಗಾರಿ ಆರಂಭಿಸಿ ಸುಮಾರು 3 ತಿಂಗಳು ಕಳೆದಿದೆ. ಆದರೂ ಕಾಮಗಾರಿ ಕೇವಲ 5 ಕಿ.ಮೀ. ಕೂಡ ಮುಗಿದಿಲ್ಲ. 27 ಕಿ.ಮೀ. ಉದ್ದದ ರಸ್ತೆಯನ್ನು ವಿಸ್ತರಣೆ ಮಾಡಿ, ಡಾಂಬರ್ ಹಾಕುವುದಕ್ಕೆ 27 ಕೋಟಿ ರೂಪಾಯಿ ಹಣ ಮಂಜೂರಾಗಿದೆ. ಕಿ.ಮೀ. ಒಂದಕ್ಕೆ ಕೋಟಿ ಹಣ ವೆಚ್ಚದಲ್ಲಿ ಆರಂಭಗೊಂಡಿರುವ ಕಾಮಗಾರಿ ಮಳೆಗಾಲಕ್ಕೂ ಮುನ್ನ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.

ರಸ್ತೆಯ ಎರಡು ಬದಿಯನ್ನು ವಿಸ್ತಾರಗೊಳಿಸಿ ತಲಾ ಒಂದು ಕಿ.ಮೀ. ವಿಸ್ತರಣೆಗೆ ಡಾಂಬರ್ ಹಾಕಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ಕಡೆ ರಸ್ತೆ ಬದಿಯ ಮರಗಳನ್ನು ಕಡಿದು ಹಾಕಲಾಗಿದೆ. ಮತ್ತೆ ಕೆಲವು ಕಡೆ ಹಾಗೆಯೇ ಉಳಿಸಲಾಗಿದೆ. ಆದರೆ ಡಾಂಬರೀಕರಣ ಮಾತ್ರ ಬಹಳ ನಿಧಾನವಾಗಿ ಸಾಗುತ್ತಿದೆ.

ಡಾಂಬರ್ ಕಿತ್ತು, ಭಾರಿ ಹೊಂಡ ಬಿದ್ದು, ರಸ್ತೆಯೇ ಇಲ್ಲದ ಕಾಡು ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಮತ್ತಿತರ ವಾಹನಗಳು ಓಡಾಡುವುದಕ್ಕೆ ತೀವ್ರ ತ್ರಾಸ ಅನುಭವಿಸುತ್ತಿವೆ. ಕಾರು ಸೇರಿದಂತೆ ಸಣ್ಣಪುಟ್ಟ ವಾಹನಗಳು ಈ ಮಾರ್ಗದಲ್ಲಿ ಒಡಾಡುವುದನ್ನೆ ನಿಲ್ಲಿಸಿವೆ.

ಮೈಸೂರು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೊಡಗಿನ ಜನತೆ ಈ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೆ ಪಿರಿಯಾಪಟ್ಟಣ ಅಥವಾ ನಾಗರಹೊಳೆ  ಮಾರ್ಗದಲ್ಲಿ ಸುತ್ತಿ ಬಳಸಿ ಓಡಾಡುತ್ತಿದ್ದಾರೆ. ಇನ್ನು ಸಾರಿಗೆ ಬಸ್ಸಿನಲ್ಲಿ ಬರುವ ಪ್ರಯಾಣಿಕರು ನಿತ್ಯವೂ ಶಾಪ ಹಾಕುತ್ತಿದ್ದಾರೆ. ಬಸ್ ಚಾಲಕರ ಸ್ಥಿತಿಯಂತೂ ಹೇಳುವುದೇ ಬೇಡ.

ಬೇಸಿಗೆಕಾಲದಲ್ಲಿ ರಸ್ತೆ ಬಿಟ್ಟು ಪಕ್ಕದಲ್ಲಿ ವಾಹನ ಓಡಿಸುತ್ತಿದ್ದರು. ಮಳೆಗಾಲ ಶುರುವಾದರೆ ಹೊಂಡ ಬಿದ್ದ ರಸ್ತೆಯಲ್ಲಿಯೇ ಓಡಿಸುವುದು ಅನಿವಾರ್ಯ.

ಪೊನ್ನಂಪೇಟೆ, ವಿರಾಜಪೇಟೆಯಲ್ಲಿ ಕೆಲಸ ಮಾಡುವ ಸರ್ಕಾರಿ ಮತ್ತು ಖಾಸಗಿ ನೌಕರರು ನಿತ್ಯವೂ ಮೈಸೂರು, ಹುಣಸೂರುಗಳಿಂದ ಓಡಾಡುತ್ತಾರೆ. ಕೆಟ್ಟ ರಸ್ತೆಯಲ್ಲಿ ಓಡಾಡಿ ಸೊಂಟ ಹಾಗೂ ಬೆನ್ನು ನೋವಿನಿಂದ ಕೆಲವರು ಹಾಸಿಗೆ ಹಿಡಿದಿದ್ದಾರೆ. ಚಾಲಕರು ಕುತ್ತಿಗೆ ನೋವಿನಿಂದ ಆಸ್ಪತ್ರೆ ಸೇರಿದ್ದಾರೆ. ಕೇರಳದ ಮಾನಂದವಾಡಿ, ಕಣ್ಣೂರು, ತೆಲಚೇರಿ ಮುಖ್ಯರಸ್ತೆಯಾಗಿದ್ದು, ಕೇರಳ ಬಸ್‌ಗಳೆ ಹೆಚ್ಚಿನದಾಗಿ ಓಡಾಡುತ್ತಿವೆ. `ಕೆಟ್ಟ ರಸ್ತೆಯಲ್ಲಿ ಬಸ್ ಓಡಿಸುವ ನರಕಕ್ಕಿಂತ ನಿವೃತ್ತರಾಗಿ  ಮನೆಯಲ್ಲಿರುವುದೇ ಲೇಸು' ಎನ್ನುತ್ತಾರೆ ಕೇರಳ ರಸ್ತೆ ಸಾರಿಗೆ ಬಸ್ ಚಾಲಕ ವಿಲ್ಸನ್.

ಗೋಣಿಕೊಪ್ಪಲು ಸೀಗೆತೋಡಿನಿಂದ ತಿತಿಮತಿವರೆಗಿನ ರಸ್ತೆ ಡಾಂಬರೀಕರಣವಾಗಿದೆ. ಆದರೆ ಕೊಡಗಿನ ಗಡಿಭಾಗ ಆನೆಚೌಕೂರುವರೆಗೂ ಕಾಮಗಾರಿ ಮುಂದುವರಿಯಬೇಕಾಗಿದೆ. ಆನೆಚೌಕೂರು ಬಳಿ ಹಾಕಿದ್ದ ಜಲ್ಲಿ ಕಲ್ಲುಗಳು ಈಗ ಮಾಯವಾಗಿದೆ. ಈ ಕಲ್ಲುಗಳನ್ನು ಬೇರೆ ಕಡೆಗೆ ಬಳಸಿಕೊಳ್ಳಲಾಗಿದೆ' ಎಂಬ ಸಬೂಬು ಗುತ್ತಿಗೆದಾರ ಮಂಜುನಾಥ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.