ADVERTISEMENT

ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 8:32 IST
Last Updated 2 ಜನವರಿ 2014, 8:32 IST

ಸೋಮವಾರಪೇಟೆ: ಸರ್ಕಾರದ ವತಿಯಿಂದ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ಆಗಬೇಕಾದರೆ, ಸ್ಥಳೀಯರು ಗಮನಹರಿಸಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ವತಿಯಿಂದ ₨ 4.93 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬೆಂಗಳೂರು -ಜಾಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿಗೆ ಸಮೀಪದ ತೋಳೂರು ಶೆಟ್ಟಳ್ಳಿಯಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಸ್ತೆ ಬಹುಕಾಲ ಉಳಿಯಲು ರಸ್ತೆ ನಿರ್ಮಾಣ ಸಂದರ್ಭ ಅಕ್ಕಪಕ್ಕದ ಮರಗಳ ಕೊಂಬೆಗಳನ್ನು ಕಡಿದು, ಸಮರ್ಪಕ ಚರಂಡಿ ನಿರ್ಮಿಸಲು ಗಮನಹರಿಸಬೇಕು ಎಂದು ಹೇಳಿದರು.

ಉದ್ದೇಶಿತ ಯೋಜನೆಯಡಿ ₨ 4.93 ಕೋಟಿ ಬಿಡುಗಡೆಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಬಾಣಾವರ ಗೇಟಿನಿಂದ ಗೋಣಿಮರೂರು ಗ್ರಾಮದಿಂದ ಮಸಗೋಡು ಗ್ರಾಮದವರೆಗೆ, ವಿವೇಕಾನಂದ ವೃತ್ತದಿಂದ ತೋಳೂರುಶೆಟ್ಟಳ್ಳಿ ಮಾರ್ಗವಾಗಿ     ಕೂತಿ ಗಡಿಯವರೆಗೆ ಕಾಂಕ್ರಿಟ್ ರಸ್ತೆಗಳನ್ನು ಹೊರತುಪಡಿಸಿ ನೂತನ ಡಾಮರು ರಸ್ತೆಯನ್ನು ನಿರ್ಮಿಸಲಾಗುವುದು.

ರಸ್ತೆಯ ಆಯ್ದ ಕಡೆಗಳಲ್ಲಿ 20 ಮೋರಿಗಳನ್ನು ನಿರ್ಮಿಸುವುದು ಹಾಗೂ ನಾಮಫಲಕಗಳನ್ನು ಅಳವಡಿಸುವ ಕಾಮಗಾರಿ ಯೋಜನೆಯಲ್ಲಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಲಲಿತಾ, ಸದಸ್ಯ ಜಿ.ಎಸ್. ಕುಶಾಲಪ್ಪ, ಪ್ರಮುಖರುಗಳಾದ ಸುಧಾಕರ್, ಹರೀಶ್, ರಾಜಪ್ಪ,  ಕೆ.ಸಿ. ಉದಯಕುಮಾರ್, ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.