ADVERTISEMENT

ರಸ್ತೆ ಕಾಮಗಾರಿ: ಮಾರ್ಚ್ ಅಂತ್ಯಕ್ಕೆ ಪೂರ್ಣ

ಶ್ರೀಕಾಂತ ಕಲ್ಲಮ್ಮನವರ
Published 20 ಫೆಬ್ರುವರಿ 2012, 6:40 IST
Last Updated 20 ಫೆಬ್ರುವರಿ 2012, 6:40 IST

ಮಡಿಕೇರಿ: ನಗರದ ಸುದರ್ಶನ ಅತಿಥಿಗೃಹ ವೃತ್ತದಿಂದ ಭಾಗಮಂಡಲ 1ನೇ ಕ್ರಾಸ್‌ವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ಸಂಭವವಿದೆ.

ಇದರಿಂದ ಮಂಗಳೂರು ಕಡೆ ಹೋಗುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಸದ್ಯಕ್ಕೆ ತೀರ ಹದೆಗಟ್ಟಿರುವ ಈ ರಸ್ತೆಯಿಂದ ಪ್ರಯಾಣಿಕರ ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.

ಕಳೆದ ವರ್ಷ ಪೂರ್ಣಗೊಂಡಿದ್ದ ಮಡಿಕೇರಿ- ಸಂಪಾಜೆ ರಸ್ತೆಯು, ಭಾಗಮಂಡಲದ 1ನೇ ಕ್ರಾಸ್‌ನಿಂದ ಮಡಿಕೇರಿ ನಗರಕ್ಕೆ ಸಂಪರ್ಕಿಸುವ ಜನರಲ್ ತಿಮ್ಮಯ್ಯ ವೃತ್ತದವರೆಗಿನ ಕಾಮಗಾರಿ ಪೂರ್ತಿಯಾಗಿರಲಿಲ್ಲ. ಅಷ್ಟರಲ್ಲಿ ಮಳೆಗಾಲ ಆರಂಭಗೊಂಡಿತ್ತು. ಅದರಿಂದಾಗಿ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.

ಈಗ ಪುನಃ ಈ ಕಾಮಗಾರಿಯನ್ನು `ಬಿ~ ಪ್ಯಾಕೇಜ್ ಅಡಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್‌ಡಿಸಿಎಲ್) ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕೆಲಸ ಬೇಗಬೇಗನೇ ಪೂರ್ಣಗೊಳ್ಳಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ಐದು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ. ಹಲವಾರು ಜನ ಕಾರ್ಮಿಕರು ಪ್ರತಿಕ್ಷಣ ಬೆವರು ಸುರಿಸುತ್ತಿದ್ದಾರೆ.

ಜನರಲ್ ತಿಮ್ಮಯ್ಯ ವೃತ್ತದಿಂದ ಭಾಗಮಂಡಲ 1ನೇ ಕ್ರಾಸ್‌ವರೆಗಿನ 4.1 ಕಿ.ಮೀ ಉದ್ದದ ಈ ರಸ್ತೆಯನ್ನು ನಿಗದಿತ ಅವಧಿಯೊಳಗೆ (ಮಾರ್ಚ್ 31) ಪೂರ್ಣಗೊಳಿಸುವ ವಿಶ್ವಾಸವನ್ನು ಕೆಆರ್‌ಡಿಸಿಎಲ್ ಎಂಜಿನಿಯರ್‌ಗಳು ವ್ಯಕ್ತಪಡಿಸಿದರು.

ರಸ್ತೆಯನ್ನು 7 ಮೀಟರ್‌ವರೆಗೆ ಅಗಲೀಕರಿಸುವುದು ಹಾಗೂ ದ್ವಿಪಥವನ್ನಾಗಿ ಮಾಡುವುದಾಗಿ ಅವರು ಹೇಳುತ್ತಾರೆ.

ಕೇಬಲ್ ಕಟ್
ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಟೆಲಿಕಾಂ ವೈರ್‌ಗಳು ಕಟ್ ಆಗಿವೆ. ಇದರಿಂದಾಗಿ ನಾಪೋಕ್ಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂಟರ್‌ನೆಟ್ ಸಂಪರ್ಕ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಕೇಬಲ್‌ಗಳನ್ನು ಸ್ಥಳಾಂತರಿಸಬೇಕಾಗಿತ್ತು ಎಂದು ಅವರು ಒತ್ತಾಯಿಸುತ್ತಾರೆ.
 
ಈ ಬಗ್ಗೆ ಕೆಆರ್‌ಡಿಸಿಎಲ್ ಎಂಜಿನಿಯರ್‌ಗಳನ್ನು ವಿಚಾರಿಸಿದರೆ, ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಟೆಲಿಕಾಂ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿದ್ದೇವು. ಆದರೆ ಅವರೇ ಅದರ ಬಗ್ಗೆ ಮುತುವರ್ಜಿ ವಹಿಸಿಲ್ಲ ಎಂದು ಹೇಳುತ್ತಾರೆ. ಆರೋಪ- ಪ್ರತ್ಯಾರೋಪ ಮಾಡುವ ಬದಲು ತಕ್ಷಣ ಸಮಸ್ಯೆಗೆ ಪರಿಹಾರ ರೂಪಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.