ADVERTISEMENT

ರಸ್ತೆ-ಚರಂಡಿ ಅಭಿವೃದ್ಧಿಗೆ ರೂ.30 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 6:20 IST
Last Updated 15 ಅಕ್ಟೋಬರ್ 2012, 6:20 IST
ರಸ್ತೆ-ಚರಂಡಿ ಅಭಿವೃದ್ಧಿಗೆ ರೂ.30 ಕೋಟಿ
ರಸ್ತೆ-ಚರಂಡಿ ಅಭಿವೃದ್ಧಿಗೆ ರೂ.30 ಕೋಟಿ   

ಮಡಿಕೇರಿ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ (2ನೇ ಹಂತ) ನಿಗದಿಯಾಗಿರುವ ರೂ. 30 ಕೋಟಿ ಅನುದಾನದಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಮಡಿಕೇರಿ ನಗರಸಭೆಯು ಅನುಮತಿ ನೀಡಿದ್ದು, ರಾಜ್ಯ ಸಮಿತಿಗೆ ಕಳುಹಿಸಿಕೊಡಲಾಗದೆ.

ತಿಂಗಳೊಳಗೆ ಅಲ್ಲಿಂದ ಅನುಮತಿ ದೊರೆಯುವ ನಿರೀಕ್ಷೆ ಇದ್ದು, ಅನುಮತಿ ದೊರೆತ ತಕ್ಷಣ ಸುಮಾರು 17 ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಟೆಂಡರ್  ಪ್ರಕ್ರಿಯೆಯೂ ಶೀಘ್ರವೇ ಆರಂಭಗೊಳ್ಳಲಿದೆ ಎಂದು ನಗರಸಭೆ ಆಯುಕ್ತ ಶಶಿಕುಮಾರ್ ತಿಳಿಸಿದರು.

ರೂ. 30 ಕೋಟಿ ಅನುದಾನದಲ್ಲಿ ಒಳಚರಂಡಿ (ಯುಜಿಡಿ) ಯೋಜನೆಗೆ ನಗರಸಭಾ ವಂತಿಗೆ ಪಾವತಿಸಲು ರೂ. 6 ಕೋಟಿ ಮೀಸಲಿಡಲಾಗಿದ್ದು, ಬಾಕಿ ಉಳಿಯುವ 24 ಕೋಟಿ ರೂಪಾಯಿ ಹಣದಲ್ಲಿ ಶೇ 80ರಷ್ಟು ಹಣವನ್ನು ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ ಇನ್ನುಳಿದ ಶೇ 20ರಷ್ಟು ಅನುದಾನವನ್ನು ಚರಂಡಿ ವ್ಯವಸ್ಥೆಗಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಅನುಮೋದನೆ ದೊರೆತ ಕಾಮಗಾರಿಗಳು:
* ನಗರದ ಕಾಲೇಜ್ ರಸ್ತೆ ರಾಣಿಪೇಟೆ ಜಂಕ್ಷನ್‌ನಿಂದ ಕಾನ್ವೆಂಟ್ ಜಂಕ್ಷನ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ, ರೆಡ್‌ಫರ್ನ್‌ನಿಂದ ಜಲಾಶಯ ಬಡಾವಣೆ- ಸುದರ್ಶನ ಗೆಸ್ಟ್ ಹೌಸ್‌ವರೆಗೆ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ, ಮೈಸೂರು ರಸ್ತೆ ಹೌಸಿಂಗ್ ಬೋರ್ಡ್ ಒಳಭಾಗದ ಮರುಡಾಂಬರೀಕರಣ, ಇಂದಿರಾಗಾಂಧಿ ವೃತ್ತದಿಂದ ಮಹದೇವ ಪೇಟೆ ರಸ್ತೆ ಅಗಲೀಕರಣಗೊಳಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, ಮಲ್ಲಿಕಾರ್ಜುನ ನಗರದ ರಸ್ತೆಗಳ ಡಾಂಬರೀಕರಣ, ಐಟಿಐ ಹಿಂಭಾಗದ ರಸ್ತೆ ಡಾಂಬರೀಕರಣ, ಅಪ್ಪಚ್ಚು ಕವಿ ರಸ್ತೆ ಮತ್ತು ಗೌಳಿಬೀದಿ ಮಸೀದಿ ರಸ್ತೆ ಮರುಡಾಂಬರೀಕರಣ, ರಾಣಿಪೇಟೆ ಒಳಭಾಗದ ರಸ್ತೆ ಮರುಡಾಂಬರೀಕರಣ, ಭಗವತಿ ನಗರ ಕೊನೆ ಭಾಗದಲ್ಲಿ ರಸ್ತೆ ಮರುಡಾಂಬರೀಕರಣ ಮತ್ತು ಡೈರಿ ಫಾರಂ ಒಳಭಾಗದ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ಇವೆ. 

 ಚರಂಡಿ ಕಾಮಗಾರಿಗಳು:

* ಅರವಿಂದ ಮೋಟಾರ್ಸ್‌ನಿಂದ ವೆಬ್ಸ್ ವೃತ್ತದ ಮೂಲಕ ಡೈರಿ ಫಾರಂವರೆಗೆ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿ.

* ಅಪ್ಪಚ್ಚುಕವಿ ರಸ್ತೆಯಿಂದ ನಗರಸಭಾ ವಸತಿಗೃಹ- ನಗರಸಭೆ ಮುಂಭಾಗದವರೆಗೆ ಚರಂಡಿ ನಿರ್ಮಾಣ. ಡಿಎಆರ್ ವಸತಿಗೃಹ ಒಳಭಾಗದ ರಸ್ತೆ ಬದಿ ಕಾಂಕ್ರೀಟ್ ಚರಂಡಿ ನಿರ್ಮಾಣ, ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗದ ರಸ್ತೆ ಬದಿ ಚರಂಡಿ ಕವರ್ ಸ್ಲ್ಯಾಬ್ ಅಳವಡಿಸಿ ಟೈಲ್ಸ್ ಅಳವಡಿಸುವುದು, ಸೇರಿದಂತೆ ಹಲವು ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.