ADVERTISEMENT

ರಸ್ತೆ ಸಂಚಾರ ನಿರ್ಬಂಧ: ತೆರವುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 5:11 IST
Last Updated 8 ಏಪ್ರಿಲ್ 2013, 5:11 IST

ಮಡಿಕೇರಿ: ನಾಲ್ಕುನಾಡು ಅರಮನೆ ಮೂಲಕ ಕಬ್ಬಿಣಕಾಡು ಮುಖ್ಯ ರಸ್ತೆ ಜಂಕ್ಷನ್‌ಗೆ, ಚೆಲವಾರ ಕೆರೆತಟ್ಟು ಜಾಗದ ಕಡೆಗೆ ಹಾಗೂ ಕರಡಿಮೂಲೆ ಜಾಗಕ್ಕೆ ತೆರಳುವ ರಸ್ತೆ ನಿರ್ಬಂಧಿಸಿರುವುದನ್ನು ತೆರವುಗೊಳಿಸಬೇಕೆಂದು ಯವಕಪಾಡಿ ಗ್ರಾಮಸ್ಥರು ಒತ್ತಾಯಿಸಿದರು.


ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೇಟೋಳೀರ ಸನ್ನಿಸೋಮಣ್ಣ, ಪಾಂಡಂಡ ನರೇಶ್ ಜೋಯಪ್ಪ ಅವರು ಮಾತನಾಡಿ, ಯುವಕಪಾಡಿ ಗ್ರಾಮದ ಆಸುಪಾಸಿನಲ್ಲಿರುವ ನಿಷೇಧಿತ ಪ್ರದೇಶದಲ್ಲಿ ವಾಣಿಜ್ಯೋದ್ಯಮಕ್ಕೆ ಅವಕಾಶ ನೀಡಿರುವುದರಿಂದ ಅನಾದಿ ಕಾಲದಿಂದ ಬಳಕೆ ಮಾಡುತ್ತಿದ್ದ ರಸ್ತೆಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದರು.

ಗ್ರಾಮದವರು ಹಲವಾರು ವರ್ಷಗಳಿಂದ ಉಪಯೋಗಿಸುತ್ತಿದ್ದ ರಸ್ತೆ, ಕುಡಿಯುವ ನೀರಿನ ಮೂಲವನ್ನು ಮುಚ್ಚಿರುವುದಕ್ಕೆ ಬಂಡವಾಳಶಾಹಿಗಳ ಪರ ಅಧಿಕಾರಿಗಳು ಹೊಂದಿರುವ ಮೃದು ಧೋರಣೆಯೆ ಕಾರಣ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿರುವ ರಸ್ತೆಯನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರವಿ ಚಂಗಪ್ಪ, ಅಪ್ಪಾರಂಡ ವೇಣುಪೊನ್ನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT