ADVERTISEMENT

ರೈತಕೂಟಕ್ಕೆ ನಬಾರ್ಡ್‌ ನೆರವು: ನಾಣಯ್ಯ

ಕೃಷಿ ತಂತ್ರಜ್ಞಾನ ಸಪ್ತಾಹ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 9:58 IST
Last Updated 14 ಡಿಸೆಂಬರ್ 2013, 9:58 IST

ಗೋಣಿಕೊಪ್ಪಲು: ಪ್ರತಿಯೊಂದು ಗ್ರಾಮದಲ್ಲಿಯೂ ರೈತ ಕೂಟ ಸ್ಥಾಪಿಸಿ ಅದರ ಮೂಲಕ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡಬೇಕು. ಈ ರೈತಕೂಟವನ್ನು ನಬಾರ್ಡ್‌ ಆರಂಭದ 3ವರ್ಷಗಳವರೆಗೆ ಪೋಷಿಸಲಿದೆ ಎಂದು ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಶುಕ್ರವಾರ ಹೇಳಿದರು.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ 4 ದಿನಗಳ ಕಾಲ ಆಯೋಜಿಸಿದ್ದ ಕೃಷಿ  ತಂತ್ರಜ್ಞಾನ ಸಪ್ತಾಹ –2013ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ರೈತರ ಅಭಿವೃದ್ಧಿಗೆ ಪ್ರತಿ ಹಳ್ಳಿಯಲ್ಲಿಯೂ ರೈತ ಕೂಟ ಸ್ಥಾಪಿಸಬೇಕು. ಕೂಟದ ಮೂಲಕ ರೈತರಿಗೆ ಬೆಲೆ ನಿಗದಿ, ಕೃಷಿ ತಂತ್ರಜ್ಞಾನದ ಪ್ರಗತಿ ಬಗ್ಗೆ ಆಗಾಗ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಹಂದಿ ಸಾಕಣೆ ಮತ್ತು ಹೈನುಗಾರಿಗೆ ಉತ್ತಮ ಲಾಭ ತರುವ ಕಸುಬಾಗಿದೆ. ರೈತರು ಈ ಕಸುಬುಗಳನ್ನು ಆರಂಭಿಸಬೇಕು. ಇದಕ್ಕೆ ನಬಾರ್ಡ್‌ ವತಿಯಿಂದ ಶೇ 25ರಷ್ಟು ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ದವಸ ಭಂಡಾರ ಸ್ಥಾಪನೆಗೆ ಶೇ 30ರಷ್ಟು ಪ್ರೋತ್ಸಾಹಧನ ಲಭಿಸಲಿದೆ. ರೈತರು ತಾವು ಬೆಳೆದ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ದವಸ ಭಂಡಾರ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಶಿಕ್ಷಣ ನಿರ್ದೇಶಕ ಡಾ.ಎನ್‌.ಎ. ಪ್ರಕಾಶ್‌ ಮಾತನಾಡಿ  ಕೃಷಿ ತಂತ್ರಜ್ಞಾನ ಸಪ್ತಾಹದಿಂದ ರೈತರಿಗೆ ಹಲವು ಮಾಹಿತಿ ದೊರೆತಿದೆ. ಕೃಷಿ ಕ್ಷೇತ್ರದಲ್ಲಿ ನೂತನ    ತಂತ್ರಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಲು ಇದು ಸಹಕಾರಿ ಎಂದರು. 

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಿ.ಸಿ. ತ್ರಿಪಾಠಿ, ವಿರಾಜಪೇಟೆ ತಾಲ್ಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಪಿ. ದೇವಕಿ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಪ್ರಸಾದ್‌, ರಮೇಶ್‌ ಹಾಜರಿದ್ದರು.

ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ವೀರೇಂದ್ರಕುಮಾರ್‌ ಸ್ವಾಗತಿಸಿದರು. ಬಿ. ಪ್ರಭಾಕರ್‌  ವಂದಿಸಿದರು.
ಸಪ್ತಾಹದಲ್ಲಿ ಟಿಲ್ಲರ್, ಟ್ರ್ಯಾಕ್ಟರ್‌, ವಿವಿಧ ಜಾತಿಯ ಸಸಿಗಳು, ಬಾಳೆ, ವೈನ್‌ ಹಾಗೂ ಹಲವು ಬಗೆಯ ಹಣ್ಣುಗಳು, ಏಲಕ್ಕಿ ಮುಂತಾದವುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.