ADVERTISEMENT

ವಚನಕಾರರ ಆದರ್ಶ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:29 IST
Last Updated 2 ಸೆಪ್ಟೆಂಬರ್ 2013, 6:29 IST

ಸೋಮವಾರಪೇಟೆ: ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಹೋರಾಟ ಮಾಡಿದ ಹಲವು ವಚನಕಾರರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕೂಡಿಗೆ ಡಯಟ್‌ನ ಉಪನ್ಯಾಸಕ ಹೇಮಂತ್‌ಕುಮಾರ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ಹಾಗೂ ಗೌಡಳ್ಳಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗೌಡಳ್ಳಿ ಪ್ರೌಢಶಾಲಾ ಆವರಣದಲ್ಲಿ ನಡೆದ ಶಾಂತಮಲ್ಲಿಕಾರ್ಜುನ ಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ವಚನಗಳಲ್ಲಿ ಕಾಯಕ ತತ್ವ ಹಾಗೂ ಪ್ರಾಣಿ ರೂಪಕಗಳು' ಎಂಬ ವಿಷಯ ಕುರಿತು ಮಾತನಾಡಿದರು.

ಯಾರು ಮೌಲ್ಯವನ್ನು ಗುರುತಿಸುತ್ತಾರೊ ಅಂಥವರು ಬೆಳೆಯುತ್ತಾರೆ. ಗುರುತಿಸಲಾರದವನು ಜೀವನದಲ್ಲಿ ಸೋಲುತ್ತಾ ಹೋಗುತ್ತಾನೆ. ವಚನ ಸಾಹಿತ್ಯ ಜಾಗೃತಿ ಸಮಾಜದ ನಿರ್ಮಾಣಕ್ಕೆ ದಿಕ್ಸೂಚಿಯಾಗಿದ್ದು, ಮನುಷ್ಯ ರಜಸ್ಸು, ತಮಸ್ಸು ಇವುಗಳಲ್ಲಿ ಸಾತ್ವಿಕತೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದರು.

ಹಿಂದೆ ಜಾತಿ, ಲಿಂಗ, ಬಡವ ಬಲ್ಲಿದ ಎಂಬ ಭೇದ ಇಲ್ಲದೆ, ಎಲ್ಲರೂ ಸಮಾನತೆಯಿಂದ ಬದುಕಿದ ಉದಾಹರಣೆಗಳು ಇತಿಹಾಸದಿಂದ ತಿಳಿಯುತ್ತದೆ.  ಸುಮಾರು 150ಕ್ಕೂ ಹೆಚ್ಚು ವಚನಕಾರರು ತಮ್ಮ ವಚನಗಳ ಮೂಲಕ ಜಾಗೃತ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಎಲ್ಲಾ ಜನರನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಅಲ್ಲಮಪ್ರಭು ರಚಿಸಿದರು. ಆದರೆ, ಪ್ರಸಕ್ತ ಯಾವುದೇ ಒಂದು ಜಾತಿಯನ್ನು ಒಗ್ಗೂಡಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದರು.

ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಬಿ. ಭರತ್‌ಕುಮಾರ್ ನೆರವೇರಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಭಾರಧ್ವಾಜ್ ಕೆ.ಆನಂದತೀರ್ಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪರಿಷತ್‌ನ ಜೆ.ಸಿ. ಶೇಖರ್, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೀರ್ಥ ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್.ಎಸ್.ಗೀತಾ, ಶಾಲಾ ಮುಖ್ಯೋಪಧ್ಯಾಯ ನಾಗೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.