ADVERTISEMENT

ವರುಣನ ಕಚಗುಳಿಗೆ ಅರಳಿದ `ಹೂ'ನಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2013, 4:48 IST
Last Updated 17 ಫೆಬ್ರುವರಿ 2013, 4:48 IST
ವರುಣನ ಕಚಗುಳಿಗೆ ಅರಳಿದ `ಹೂ'ನಗೆ
ವರುಣನ ಕಚಗುಳಿಗೆ ಅರಳಿದ `ಹೂ'ನಗೆ   

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ಶನಿವಾರ ಮೊದಲ ಹೂ ಮಳೆಯಾಗಿದ್ದು, ಒಂದು ವಾರದ ಬಳಿಕ ಇಲ್ಲಿನ ಕಾಫಿ ತೋಟಗಳಲ್ಲಿ ರೋಬಸ್ಟಾ ತಳಿಯ ಹೂಗಳು ಅರಳಿ ಘಮಘಮಿಸುತ್ತಿವೆ. ಮುಂದಿನ ಫಸಲನ್ನು ಹುಲುಸಾಗಿ ನೀಡುವ ಅಭಯವನ್ನು ವರುಣದೇವ ನೀಡಿದ್ದಾನೆ. ಇದರಿಂದ ಕಾಫಿ ಬೆಳೆಗಾರರ ಮುಖದಲ್ಲಿ `ಹೂ' ನಗೆ ಮೂಡಿದೆ.

ಸಕಾಲದಲ್ಲಿ ಉತ್ತಮ ಹೂ ಮಳೆ ಸುರಿದಿರುವುದು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಪ್ರತಿವರ್ಷ ಮಾರ್ಚ್ ಮೊದಲ ವಾರದಲ್ಲಿ ಹೂ ಮಳೆಗಾಗಿ ಬೆಳೆಗಾರರು ಕಾತರಿಸುತ್ತಿದ್ದರು. ಆದರೆ ಈ ವರ್ಷ ವರುಣದೇವ ಅವಧಿಗಿಂತ ಮೊದಲೇ ಕೃಪೆ ತೋರಿದ್ದಾನೆ.

ಅಲ್ಲಲ್ಲಿ ಕಾಫಿ ಫಸಲು ಕೊಯ್ಲು ಹಾಗೂ ಸಂಸ್ಕರಣೆ ಬಾಕಿ ಉಳಿದಿದ್ದು, ಅಂಥವರು ಮಾತ್ರ ತುಸು ಗಲಿಬಿಲಿಗೊಂಡಿದ್ದಾರೆ. ಆದರೆ ಮಳೆ ಬಂದಿರುವುದರಿಂದ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಹೂ ಅರಳಿಸುವ ಗೋಳು ತಪ್ಪಿದೆ ಎಂಬ ಸಮಾಧಾನ ಮೂಡಿದೆ.

ಗುರುವಾರದಿಂದ ಮೋಡ ಕವಿದ ವಾತಾವರಣವಿದ್ದು, ರೈತರ ಕಣ್ಣೆಲ್ಲ ಈಗ ಆಕಾಶದಲ್ಲಿ ನೆಟ್ಟಿವೆ. ತುಂತುರು ಮಳೆ ಕಾಫಿ ಬೆಳೆಗೆ ಕಚಗುಳಿ ಇಟ್ಟು ನಗೆ ಹೂ ಮೂಡಿಸಿದೆ.

ಕಾಫಿ ಹೂ ಅರಳುವ ಸಮಯ ಇದಾಗಿರುವುದರಿಂದ ಉತ್ತಮ ಹೂ ಮಳೆಯಿಂದ ಮುಂದಿನ ವರ್ಷದ ಫಸಲು ಅಧಿಕ ಗೊಳ್ಳಲಿದೆ ಎಂಬುದು ಕಾಫಿ ಬೆಳೆಗಾರರ ಅಭಿಮತ. ಈಗಾಗಲೇ ರೋಬಸ್ಟಾ ಕಾಫಿಯ ಹೂಗಳು ಅರಳುತ್ತಿದ್ದು ಎರಡು ದಿನಗಳ ಬಳಿಕ ಉತ್ತಮ ಮಳೆಯಾದರೆ ಸೂಕ್ತ ಬ್ಯಾಕಿಂಗ್ ಸಿಕ್ಕಿದಂತಾಗುತ್ತದೆ ಎಂಬ ಲೆಕ್ಕಾಚಾರ ಬೆಳೆಗಾರರದ್ದು.

ಅಕಾಲಿಕ ಮಳೆಯಿಂದ ಕಾಫಿ ಕೊಯ್ಲು ಪೂರೈಸದ ಬೆಳೆಗಾರರು ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅರಳಿ ಘಮಘಮಿಸುತ್ತಿರುವ ಹೂವಿನಿಂದ ಕಷ್ಟದ ನಡುವೆಯೂ ಬೆಳೆಗಾರರ ಮೊಗದಲ್ಲಿ ನಗು ಅರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.