ADVERTISEMENT

ವಾಸಸ್ಥಳ ಬದಲಿಸದಿರಲು ಗಿರಿಜನರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:56 IST
Last Updated 27 ಡಿಸೆಂಬರ್ 2012, 7:56 IST

ಸೋಮವಾರಪೇಟೆ: ಜಿಲ್ಲೆಯ ಯಡವನಾಡು ಹಾಗೂ ಕೂಪಾಡಿ ಸೇರಿದಂತೆ ಎಲ್ಲ ಬುಡಕಟ್ಟು ಜನಾಂಗದವರು ಈಗ ವಾಸಿಸುತ್ತಿರುವ ಸ್ಥಳದಲ್ಲಿಯೇ ಇನ್ನು ಮುಂದೆಯೂ ವಾಸಿಸಲು ತೀರ್ಮಾನಿಸಿದ್ದಾರೆ ಎಂದು ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರ ಹೇಳಿದರು.

ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಸೋಮವಾರಪೇಟೆ ತಾಲ್ಲೂಕು ಶಾಖೆ ಹಾಗೂ ಯಡವನಾಡು ಕೂಪಾಡಿಯ ಅರಣ್ಯ ಹಕ್ಕು ಸಮಿತಿ ಆಶ್ರಯದಲ್ಲಿ ಈಚೆಗೆ  ಸಮೀಪದ ಯಡವನಾಡು ಗಿರಿಜನ ಹಾಡಿಯಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಹಕ್ಕು ಕಾಯ್ದೆ ಜಾರಿ ಸಂಬಂಧದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆದಿವಾಸಿಗಳು ತಲೆತಲಾಂತರದಿಂದ ಕಾಡನ್ನೇ ನಂಬಿದ್ದು, ಈಗ ಸರ್ಕಾರದ ಕಾಯ್ದೆ ಕಟ್ಟುಪಾಡುಗಳಿಗೆ ಒಳಗಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲದೇ ಅತಂತ್ರರಾಗಿದ್ದಾರೆ. ಈ ಹಿಂದಿನ ಯಾವುದೇ ಸರ್ಕಾರಗಳು ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಮಾನ್ಯ ಮಾಡಲಿಲ್ಲ.

ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದಾಖಲೆ ಪುರಾವೆಗಳನ್ನು ಒದಗಿಸಿದ್ದರೂ ಸಮರ್ಪಕವಾಗಿ ಸ್ಪಂದಿಸದೇ ಇಂದಿಗೂ ಅತಂತ್ರರಾಗುವಂತೆ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಇಂದಿನ ಸಭೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದರೂ ಸಹ ಗೈರುಹಾಜರಾಗುವ ಮೂಲಕ ಗಿರಿಜನರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು.

ನ್ಯಾಯಯುತ ಹೋರಾಟವನ್ನು ಮುಂದುವರಿಸಲು ಒಮ್ಮತದ ತೀಮಾನದೊಂದಿಗೆ, ಇತರರಿಂದ ಗಿರಿಜನರಿಗೆ ತೊಂದರೆಯಾದಲ್ಲಿ ಅದಕ್ಕೆ ಸರ್ಕಾರವನ್ನೇ ಹೊಣೆಯನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಗೆ ರಾಜ್ಯ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ, ಅರಣ್ಯ ಹಕ್ಕು ಸಮಿತಿ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಾರಾವ್ ಸೇರಿದಂತೆ ಇತರ ಜನಪ್ರತಿನಿಧಿಗಳು ಗೈರುಹಾಜರಾಗಿದ್ದರಿಂದ ಸಭೆಯಲ್ಲಿ ಭಾಗವಹಿಸಿದ್ದ ಗಿರಿಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಡ್ ಸಂಸ್ಥೆಯ ನಿರ್ದೇಶಕ ರಾಯ್ ಡೇವಿಡ್, ಜಿಲ್ಲಾ ಬುಡಕಟ್ಟು ಕೃಷಿಕರ  ಸಂಘದ ಅಧ್ಯಕ್ಷ ಜೆ.ಪಿ.ರಾಜು, ಯಡವನಾಡು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷೆ ಗಿರಿಜಮ್ಮ, ವೀರಾಜಪೇಟೆ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳಾದ ತಿಮ್ಮ, ಸೋಮಯ್ಯ, ಪ್ರಮುಖರಾದ ಧರ್ಮ, ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.