ADVERTISEMENT

`ಶಾಲೆಗಳ ಹೆಸರಿಗೆ ಆಸ್ತಿ ವರ್ಗಾವಣೆ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 7:50 IST
Last Updated 20 ಡಿಸೆಂಬರ್ 2012, 7:50 IST

ಮಡಿಕೇರಿ: ತಾಲ್ಲೂಕಿನ ಎ್ಲ್ಲಲ ಸರ್ಕಾರಿ ಶಾಲೆಗಳ ಆಸ್ತಿಯ ಕುರಿತು ದಾಖಲೆಗಳನ್ನು ಒದಗಿಸಿದರೆ ಶಾಲೆಗಳ ಆಸ್ತಿಯನ್ನು ಸರ್ಕಾರದ ಹೆಸರಿಗೆ ವರ್ಗಾವಣೆ ಮಾಡಲು ಸೂಕ್ತ ಕ್ರಮ ಜರುಗಿಸುವುದಾಗಿ ಮಡಿಕೇರಿ ತಹಶೀಲ್ದಾರ್ ವಾಸುದೇವಚಾರ್ ಜಹಾಗೀರ್‌ದಾರ್ ಭರವಸೆ ನೀಡಿದರು.

ನಗರದ ಎಸ್‌ಜೆಎಸ್‌ವೈ ಸಭಾಂಗಣದಲ್ಲಿ ಬುಧವಾರ ನಡೆದ ಮಡಿಕೇರಿ ತಾಲ್ಲೂಕಿನ ಎಲ್ಲಾ  ಸರ್ಕಾರಿ ಶಾಲೆಗಳ ದಾಖಲೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಶಾಲೆಯ ಆಸ್ತಿಯ ಬಗ್ಗೆ ಸೂಕ್ತ ನಕಾಶೆ ಹಾಗೂ ಆರ್‌ಟಿಸಿ ಅಗತ್ಯವಾಗಿದ್ದು, ಈ ದಾಖಲೆಗಳು ಇಲ್ಲದಿದ್ದರೂ ಇರುವ ದಾಖಲೆಗಳನ್ನೇ ಸೂಕ್ತ ರೀತಿ ಒದಗಿಸಬೇಕೆಂದರು.

ತಾಲ್ಲೂಕಿನ ಹಲವು ಶಾಲೆಯ ಒತ್ತುವರಿ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಸಮಗ್ರ ದಾಖಲೆ ಒದಗಿಸಿದಲ್ಲಿ ಮಾತ್ರ ಈ ಕೆಲಸ ಸಾಕಾರಗೊಳ್ಳಲು ಸಾಧ್ಯ ಎಂದರು.

ಎಲ್ಲಾ ಶಾಲೆಗಳ ದಾಖಲೆಗಳು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಆಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿಗೆ ನೋಂದಾಯಿಸಿಕೊಳ್ಳಬೇಕು. ಇದುವರೆಗೆ ಈ ಕೆಲಸ ಆಗದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು.

ಮಡಿಕೇರಿ ತಾಲ್ಲೂಕು ಪಂಚಾಯಿತಿ ಸದಸ್ಯ ನೆರವಂಡ ಉಮೇಶ್ ಮಾತನಾಡಿ, ತಾಲ್ಲೂಕಿನ ಕಿರಿಯ, ಹಿರಿಯಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ತಮ್ಮಲ್ಲಿರುವ ಎಲ್ಲಾ ದಾಖಲೆಯನ್ನು ಶಿಕ್ಷಣಾಧಿಕಾರಿಗಳಿಗೆ ಒದಗಿಸಬೇಕೆಂದು ಹೇಳಿದರು.

ಈ ನಿಟ್ಟಿನಲ್ಲಿ ಶೀಘ್ರವೇ ಶಿಕ್ಷಕರು ಶಾಲೆಯಲ್ಲಿರುವ ಎಲ್ಲಾ ದಾಖಲೆಗಳನ್ನು ಮುಂದಿನ 15 ದಿನಗಳಲ್ಲಿ ತಲುಪಿಸುವಂತೆ ಅವರು ಕೋರಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸಲು ತಾಲ್ಲೂಕಿನ ಕೆಲ ಶಾಲೆಯ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಯಾವುದೇ ಕ್ರಮ ವಹಿಸುವುದು ಬೇಡ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರನ್ ಮಾತನಾಡಿ, ಯಾವ ಶಾಲೆಗಳ ಆಸ್ತಿ ಸರ್ಕಾರ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ದಾನಿಗಳ ಹೆಸರಿನಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ತಾಲ್ಲೂಕಿನ ಹಲವು ಶಾಲೆಗಳ ಮುಖ್ಯೋಪಾಧ್ಯಾಯರು ಶಾಲೆಗಳ ದಾಖಲೆಯ ಬಗ್ಗೆ ಕೆಲ ಮಾಹಿತಿ ಪಡೆದುಕೊಂಡರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀನಾ ಜಗನ್ನಾಥ್, ಉಪಾಧ್ಯಕ್ಷೆ ಯಲದಾಳು ಪದ್ಮಾವತಿ,  ಸದಸ್ಯರಾದ ಸಾಬು ತಿಮ್ಮಯ್ಯ, ರೇಣುಕಾ ಚೆನ್ನಿಗಯ್ಯ, ಕಾರ್ಯನಿರ್ವಹಣಾಧಿಕಾರಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT