ADVERTISEMENT

ಶಿಕ್ಷಕರ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 9:45 IST
Last Updated 10 ಜನವರಿ 2012, 9:45 IST

ಸೋಮವಾರಪೇಟೆ: ಶಾಂತಳ್ಳಿಯಲ್ಲಿ ಮುಖ್ಯ ಶಿಕ್ಷಕರೋರ್ವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಪ್ರತಿಭಟನಾ ಸಭೆ ನಡೆಯಿತು.

ಚನ್ನಬಸಪ್ಪ ಸಭಾಂಗಣದಲ್ಲಿ ಸಭೆ ಸೇರಿದ ಶಿಕ್ಷಕರು ಸಮಸ್ಯೆ ಬಗ್ಗೆ ಚರ್ಚಿಸಿದರು. ಈಚೆಗೆ ತಾಲ್ಲೂಕಿನಲ್ಲಿ ಶಿಕ್ಷಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಮಾನಸಿಕವಾಗಿ ಮತ್ತು ನೈತಿಕವಾಗಿ ಮನಸ್ಥೈರ್ಯ ಕುಗ್ಗಿಸುವಂಥ ಘಟನೆ ಜಾಸ್ತಿಯಾಗುತ್ತಿವೆ. ಸರ್ವಶಿಕ್ಷಣ ಅಭಿಯಾನದ ವತಿಯಿಂದ ನಿರ್ಮಿಸಲಾಗುತ್ತಿರುವ ಶಾಲಾ ಕಟ್ಟಡಗಳ ಕಾಮಗಾರಿಗಳ ಹೊಣೆಯನ್ನು ಮುಖ್ಯ ಶಿಕ್ಷಕರಿಗೆ ನೀಡುತ್ತಿರುವುದು ಖಂಡನೀಯ. ಮುಖ್ಯ ಶಿಕ್ಷಕರು ಯಾವುದೇ ಸ್ವತಂತ್ರ ತೀರ್ಮಾನ ಕೈಗೊಳ್ಳಲಾಗದೆ ಜನಪ್ರತಿನಿಧಿಗಳು ಮತ್ತು ಎಸ್‌ಡಿಎಂಸಿ ಒತ್ತಡಕ್ಕೆ ಮಣಿದು ಕೆಲಸಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಗಳಲ್ಲಿ ಏರುಪೇರಾದಾಗ ಮುಖ್ಯ ಶಿಕ್ಷಕರನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಪೂರ್ವಾಪರ ಯೋಚಿಸದೆ ಸಾರ್ವಜನಿಕರ ಎದುರು ಶಿಕ್ಷಕರನ್ನು ನಿಂದಿಸುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದರು.

ಕುಶಾಲನಗರ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಎಸ್.ಡಿ.ಎಂಸಿಯ ಮಾಜಿ ಅಧ್ಯಕ್ಷರೋರ್ವರು ಮುಖ್ಯ ಶಿಕ್ಷಕರ ಗಮನಕ್ಕೆ ಬಾರದೆ ಸಾರ್ವಜನಿಕರು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಸಂಗತಿಯನ್ನು ಶಿಕ್ಷಕರು ಸಭೆಯ ಗಮನಕ್ಕೆ ತಂದರು.

ಈಚಿನ ದಿನಗಳಲ್ಲಿ ಶಿಕ್ಷಕರಿಗೆ ಭದ್ರತೆ ಮತ್ತು ರಕ್ಷಣೆ ಇಲ್ಲದಾಗಿದ್ದು, ಸರಕಾರವು ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸದೆ ಕೇವಲ ಪಾಠ ಪ್ರವಚನಗಳಿಗೆ ಸೀಮಿತಗೊಳಿಸಬೇಕೆಂದು ಒತ್ತಾಯಿಸಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಿಂದ ತಾಲೂಕು ಕಚೇರಿಯವರೆಗೆ ಮೌನ ಮೆರವಣಿಗೆ ಮೂಲಕ ತೆರಳಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ತಹಶೀಲ್ದಾರ್ ದೇವರಾಜ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎ.ಯೋಗೇಶ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಬಿ.ಪ್ರಕಾಶ್, ಕಾರ್ಯದರ್ಶಿ ಎಚ್.ಎನ್.ಮಂಜುನಾಥ್, ಉಪಾಧ್ಯಕ್ಷೆ ಪಿ.ಯು.ಬೋಜಮ್ಮ ಸಂಘಟನಾ ಕಾರ್ಯದರ್ಶಿ ಜಿ.ಪಿ.ಕವಿತಾ, ನಿರ್ದೇಶಕರಾದ ಎಚ್.ಎಸ್.ಚೇತನ್, ಕೆ.ಜೆ.ನಾಗೇಂದ್ರ, ಕೆ.ಡಿ.ನವೀನ, ಬಿ.ಡಿ ಯಶುಮತಿ ಮತ್ತು ಕೆ.ಜಿ.ಗೋಪಾಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.