ಕೆ.ಆರ್.ನಗರ: `ಪುರುಷರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾದರೆ ನಿಶ್ಯಕ್ತರಾಗುತ್ತಾರೆ ಎಂಬುದು ತಪ್ಪು ಕಲ್ಪನೆ~ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಯೋಜನಾ ನಿರ್ದೇಶಕ ಡಾ.ವಿ.ರಾಜು ಹೇಳಿದರು.
ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುರುಷರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಈ ತಪ್ಪು ಕಲ್ಪನೆಯಿಂದ ಕಾಲ ಕ್ರಮೇಣ ಮಹಿಳೆಯರೇ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತಾಯಿತು. ಆದರೆ ಇಂದು ಕಾಲ ಬದಲಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಪುರುಷರು ಹೊಲ ಗದ್ದೆಗಳು ಸೇರಿದಂತೆ ಎಲ್ಲ ಕಡೆ ಕೆಲಸ ಮಾಡಬಹುದಾಗಿದೆ. ಪುರುಷರು ಯಾವುದೇ ಆತಂಕಕ್ಕೆ ಒಳಗಾಗದೇ ಸ್ವಯಂ ಪ್ರೇರಣೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು~ ಎಂದು ಹೇಳಿದರು.
`ಶಸ್ತ್ರ ಚಿಕಿತ್ಸೆ ಒಳಗಾದ ಪುರುಷ ಫಲಾನುಭವಿಗಳಿಗೆ ರೂ.1100, ಮಹಿಳಾ ಫಲಾನುಭವಿಗಳಿಗೆ ರೂ. 600 ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಮನವೊಲಿಸಿದವರಿಗೆ ರೂ.200 ನೀಡಲಾಗುತ್ತದೆ. ಅದರಂತೆ ಸರ್ಕಾರಿ ನೌಕರರು ಫಲಾನುಭವಿಗಳು ಆಗಿದ್ದಲ್ಲಿ ಸರ್ಕಾರ ನಿಗದಿಪಡಿಸಿದ ಸೌಲಭ್ಯಗಳು ದೊರೆಯಲಿವೆ~ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ಹತ್ತು ಪುರುಷರು ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ. ಮಂಜುನಾಥ್, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಎಚ್.ರಾಮಚಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ಶಿವಪ್ರಸಾದ್, ಡಾ. ಸರ್ವೇಶ್‌ರಾಜೇ ಅರಸ್, ಆರೋಗ್ಯ ಶಿಕ್ಷಣ ಅಧಿಕಾರಿ ಮಿರ್ಲೆ ಲೋಕನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.