ADVERTISEMENT

ಸಂತ್ರಸ್ತರಿಗೆ ಆರ್ಥಿಕ ನೆರವು ವಿತರಣೆ

ಬ್ಯಾಂಕ್‌ ಲಾಭಾಂಶ: ಸಂತ್ರಸ್ತರ ಸದಸ್ಯರಿಗೆ ಹಂಚಿಕೆ  

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 12:13 IST
Last Updated 8 ಮಾರ್ಚ್ 2019, 12:13 IST
ಮಡಿಕೇರಿಯ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಿಸಲಾಯಿತು
ಮಡಿಕೇರಿಯ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಿಸಲಾಯಿತು   

ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿದ್ದ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಸದಸ್ಯರಿಗೆ ಶುಕ್ರವಾರ ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಹಾರದ ಚೆಕ್ ವಿತರಿಸಲಾಯಿತು.

ಚೆಕ್‌ ವಿತರಿಸಿದ ಬ್ಯಾಂಕ್‌ ಅಧ್ಯಕ್ಷ ಎ.ಮನು ಮುತ್ತಪ್ಪ, ‘ಬ್ಯಾಂಕ್‌ ತನ್ನ 2017–18ನೇ ಸಾಲಿನ ₹ 10 ಲಕ್ಷ ಲಾಭಾಂಶವನ್ನು ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ವಿತರಿಸಲು ನಿರ್ಧರಿಸಿ ಕಾರ್ಯರೂಪಕ್ಕೆ ತಂದಿದೆ ಎಂದರು.

ಮಾದಾಪುರ, 2ನೇ ಮೊಣ್ಣಂಗೇರಿ, ಕಾಲೂರು, ಮುಕ್ಕೂಡ್ಲು ಭಾಗದ ನಿರಾಶ್ರಿತರನ್ನು ಗುರುತಿಸಲಾಗಿದೆ. ಬ್ಯಾಂಕ್‌ನ ವಾರ್ಷಿಕ ಲಾಭಾಂಶದಲ್ಲಿ ₹ 7.50 ಲಕ್ಷ, ಬ್ಯಾಂಕ್‌ ನಿಧಿಯಿಂದ ₹ 2 ಲಕ್ಷ ಹಾಗೂ ಬ್ಯಾಂಕ್‌ ಸಿಬ್ಬಂದಿ ನೀಡಿದ್ದ ₹ 50 ಸಾವಿರ ಒಟ್ಟುಗೂಡಿಸಿ ಸಂತ್ರಸ್ತರಿಗೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಶೇ 80 ಹಾನಿಗೊಳಗಾದ ನಿರಾಶ್ರಿತರಿಗೆ ₹ 30 ಸಾವಿರ, ಶೇ 50 ಹಾನಿಗೊಳಗಾದವರಿಗೆ ₹ 20 ಸಾವಿರ ಹಾಗೂ ಶೇ 50ಕ್ಕಿಂತ ಕಡಿಮೆ ಹಾನಿಗೆ ಒಳಗಾದವರಿಗೆ ₹ 10 ಸಾವಿರ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

1957ರಲ್ಲಿ ಕೇವಲ 25 ಮಂದಿ ಸದಸ್ಯರನ್ನೊಳಗೊಂಡು ಆರಂಭವಾದ ಬ್ಯಾಂಕ್ ₹ 3 ಸಾವಿರ ಪಾಲು ಬಂಡವಾಳ ಹೊಂದಿತ್ತು. ಸತತ 40 ವರ್ಷ ನಷ್ಟದಲ್ಲಿದ್ದ ಬ್ಯಾಂಕ್‌ 2005ರಿಂದ ಈಚೆಗೆ ಲಾಭಂಶದತ್ತ ದಾಪುಗಾಲು ಇಡುತ್ತಿದೆ ಎಂದು ಮನು ಮುತ್ತಪ್ಪ ತಿಳಿಸಿದರು.

ಬ್ಯಾಂಕ್‌ನಲ್ಲಿ 2,550 ಸದಸ್ಯರಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿಯಾಗುತ್ತಿದೆ. ಪ್ರತಿವರ್ಷ ಲಾಭಾಂಶವನ್ನು ಹೆಚ್ಚಿಸುತ್ತಿರುವ ಕಾರಣ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2016–17ನೇ ಸಾಲಿನ ಸರ್ವಾಂಗೀಣ ಪ್ರಗತಿ ಸಾಧಿಸಿರುವುದರಿಂದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬ್ಯಾಂಕ್‌ ನಿರ್ದೆಶಕರಾದ ಬಿ. ಮೇದಪ್ಪ, ಮಾತಂಡ ಪೊನ್ನಮ್ಮ, ವ್ಯವಸ್ಥಾಪಕ ಎನ್‌.ಎಸ್. ಬಾಲಗಂಗಾಧರ್‌, ವಾಸಪ್ಪ, ಕಾವೇರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.