ADVERTISEMENT

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:10 IST
Last Updated 21 ಫೆಬ್ರುವರಿ 2011, 8:10 IST

ಮಡಿಕೇರಿ: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ತೆರವುಗೊಳಿಸುವ ಪ್ರಮುಖ ಜವಾಬ್ದಾರಿ ತಹಶೀಲ್ದಾರ್‌ಗಳ ಮೇಲಿದೆ. ಇದರ ಜೊತೆಗೆ, ಆಯಾಯ ಇಲಾಖೆಗಳು ತಮ್ಮ ಆಸ್ತಿಯನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.ಇದಕ್ಕಾಗಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ತಿಳಿಸಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂರು ತಾಲ್ಲೂಕುಗಳ ತಹಶೀಲ್ದಾರರು ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಒತ್ತುವರಿಯಾಗಿರುವ ಸರ್ಕಾರಿ ಜಮೀನು, ಗೋಮಾಳ, ಕೆರೆ ಹಾಗೂ ಇಲಾಖೆಗಳಿಗೆ ಸೇರಿದ ಜಾಗಗಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.ಹತ್ತು ಎಕರೆಗೂ ಅಧಿಕವಾಗಿ ಒತ್ತುವರಿಯಾಗಿರುವ ಪ್ರಕರಣಗಳಲ್ಲಿ ಕೂಡಲೇ ಕಾರ್ಯಾಚರಣೆ ನಡೆಸಿ ತೆರವಿಗೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಇತರ ಇಲಾಖೆಗಳು ತಮಗೆ ಸೇರಿದ ಜಮೀನು ಒತ್ತುವರಿಯಾಗಿರುವುದನ್ನು ತಾವೇ ಗುರುತಿಸಬೇಕು. ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ನೆರವು ಪಡೆದು ತಮ್ಮ ವಶಕ್ಕೆ ಪಡೆದುಕೊಳ್ಳುವ ಹಾಗೂ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿದೆ ಎಂದು ಸೂಚಿಸಿದರು.ಘನತ್ಯಾಜ್ಯ ವಿಲೇವಾರಿ ಆಯಾಯ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಆ ಪ್ರದೇಶಕ್ಕೆ ಮಂಜೂರು ಮಾಡಲಾಗುವುದು. ಸಿದ್ದಾಪುರ, ಸುಂಟಿಕೊಪ್ಪ ಮತ್ತಿತರೆಡೆ ಕಸ ವಿಲೇವಾರಿ ಸಮಸ್ಯೆ ಪ್ರತಿನಿತ್ಯ ಸುದ್ದಿಯಾಗುತ್ತಿದ್ದು, ಈ ಬಗ್ಗೆ ಜಿ.ಪಂ. ಗಮನಹರಿಸಬೇಕು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಮಾತನಾಡಿ, ಸಿದ್ದಾಪುರ ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿಗಾಗಿ ಪರಿಶೀಲನೆ ನಡೆಸಿದರೂ ಸಮರ್ಪಕ ಜಾಗ ಲಭ್ಯವಾಗುತ್ತಿಲ್ಲ. ಹೀಗಾಗಿ, ಪಂಚಾಯ್ತಿ ವತಿಯಿಂದ ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಜಿ.ಪಂ. ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಮಾತನಾಡಿ, ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ರಚನೆಗೊಂಡ ನಂತರ ಸರ್ಕಾರಿ ಜಮೀನಿನ ರಕ್ಷಣಾ ಕಾರ್ಯವೂ ಚುರುಕುಗೊಂಡಿದೆ. ಸಮಿತಿಯು ಸರ್ಕಾರದ ಆಸ್ತಿ ರಕ್ಷಣೆಗೆ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಬೇಕು. ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ರೇಷ್ಮೆ, ಶಿಕ್ಷಣ, ಆರೋಗ್ಯ ಹಾಗೂ ವಿವಿಧ ಇಲಾಖೆಗಳು ತಮ್ಮ ಜಾಗ ಒತ್ತುವರಿಯಾಗಿದ್ದಲ್ಲಿ ತೆರವಿಗೆ ಕ್ರಮ ವಹಿಸಬೇಕು. ನಗರದಲ್ಲಿ ಸರ್ಕಾರಿ ಭೂಮಿ ಅತಿಕ್ರಮಣಗೊಂಡಿದ್ದಲ್ಲಿ ಅದನ್ನು ತೆರವುಗೊಳಿಸಲು ನಗರಸಭೆ ಮುಂದಾಗಬೇಕು ಎಂದರು.

ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಪ್ರತಿ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಸಮಿತಿ ಸಭೆ ಕರೆದು ಕಾಲಕಾಲಕ್ಕೆ ವರದಿ ಸಲ್ಲಿಸಬೇಕು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರೊಂದಿಗೆ ಸಮನ್ವಯತೆ ಕಾಯ್ದುಕೊಳ್ಳಬೇಕು. ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿರುವ ಪ್ರಕರಣಗಳ ಒತ್ತುವರಿ ತೆರವುಗೊಳಿಸಬಹುದಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಮಾತನಾಡಿ, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸಾಕಷ್ಟು ಭೂಮಿ ಒತ್ತುವರಿಯಾಗಿದ್ದು, ಅದರ ತೆರವಿಗೆ ಕಂದಾಯ ಇಲಾಖೆಯ ಸಹಕಾರ ಪಡೆಯಲಾಗುತ್ತಿದೆ. ಇನ್ನು ನೂರಾರು ಎಕರೆ ಪ್ರದೇಶ ಇಲಾಖೆ ವಶದಲ್ಲಿದ್ದರೂ ಆರ್‌ಟಿಸಿ ಅರಣ್ಯ ಇಲಾಖೆ ಹೆಸರಿಗೆ ವರ್ಗಾವಣೆಯಾಗಬೇಕಿದೆ. ದೇವರಕಾಡು ಸೇರಿದಂತೆ ಮೀಸಲು ಅರಣ್ಯ ಪ್ರದೇಶದ ಒತ್ತುವರಿ ತೆರವಿಗೆ ಆದ್ಯತೆ ಮೇರೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳ ಜಮೀನು, ಕೆರೆಗಳ ಸ್ಥಿತಿಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಡಿವೈಎಸ್‌ಪಿ ಜೆ.ಡಿ. ಪ್ರಕಾಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.