ADVERTISEMENT

ಸಾವಯವ ಕೃಷಿಗೆ ಒತ್ತುನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:13 IST
Last Updated 1 ಜನವರಿ 2014, 8:13 IST

ಸೋಮವಾರಪೇಟೆ: ರೈತರು ಹೆಚ್ಚಾಗಿ ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಗುಣಮಟ್ಟದ ಆಹಾರದೊಂದಿಗೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಸೋಮವಾರಪೇಟೆ ಕೃಷಿ ಇಲಾಖೆ, ಹಿರಿಕರ ಗ್ರಾಮದ ಮಲ್ಲೇಶ್ವರ ಸಾವಯವ ಕೃಷಿಕರ ಸಂಘ ಹಾಗೂ ಮಂಡ್ಯದ ಮೈತ್ರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಹಿರಿಕರ ಗ್ರಾಮದಲ್ಲಿ ನಡೆದ ‘ಸಾವಯವ ಬೆಳೆ ಕ್ಷೇತ್ರೋತ್ಸವ ಹಾಗೂ ವಸ್ತು ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಕರ ಸಾವಯವ ಗ್ರಾಮ ಯೋಜನೆಯ ಅಧ್ಯಕ್ಷ ಎಚ್.ಡಿ. ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್.ಎಸ್. ಗೀತಾ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೀರ್ಥಾ ಹರೀಶ್, ಸದಸ್ಯೆ ರೇಖಾ ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕ ಡಾ.ರಾಜಶೇಖರ್, ಯೋಜನೆಯ ಸ್ಥಳಾಧಿಕಾರಿ ಡಾ.ಮುಕುಂದ, ರೈತ ಪ್ರತಿನಿಧಿ ಬಿ.ಎನ್. ವಸಂತ್ ಕುಮಾರ್, ಯೋಜನೆಯ ಖಜಾಂಚಿ  ಸಿ.ಎಲ್. ಮಂಜುನಾಥ್, ಕ್ಷೇತ್ರಾಧಿಕಾರಿ ಬೋಜಪ್ಪ, ಮೈತ್ರಿ ಗ್ರಾಮೀಣಾಭಿವೃದ್ಧಿ ಸಮಿತಿ ಸಂಯೋಜಕ ಚಿಕ್ಕೇಗೌಡ ಇದ್ದರು.

ಪ್ರಗತಿಪರ ಸಾವಯವ ಕೃಷಿಕರಾದ ಹಿರಿಕರ ಗ್ರಾಮದ ಎಚ್.ಸಿ. ತಿಮ್ಮಯ್ಯ ಹಾಗೂ ಎಚ್.ಸಿ. ಪ್ರಮೀಳಾ ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ರೈತರ ಸಾವಯವ ಕೃಷಿ ಬೆಳೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಪುಸ್ತಕ ಬಿಡುಗಡೆ
ಮಡಿಕೇರಿ: ಸಂಸದ ಎಚ್‌. ವಿಶ್ವನಾಥ್‌ ಅವರು ಬರೆದಿರುವ ‘ಮಲ್ಲಿಗೆಯ ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಗರದ ಕೂರ್ಗ್‌ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ಜ.4ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಸಾಹಿತಿ ಚಂದ್ರಶೇಖರ ಕಂಬಾರರು ಪುಸ್ತಕವನ್ನು ಬಿಡುಗಡೆ ಮಾಡುವರು. ಇಂಗ್ಲಿಷ್‌ ಲೇಖಕರಾದ ಸಿ.ಪಿ. ಬೆಳ್ಳಿಯಪ್ಪ, ಕವಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರೂಪಕರಾದ ಅಬ್ದುಲ್ ರಶೀದ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.