ADVERTISEMENT

ಸೋಮವಾರಪೇಟೆ: ಅನಾಥ ಆನೆಮರಿ ಸಾಕಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:10 IST
Last Updated 20 ಮಾರ್ಚ್ 2011, 10:10 IST

ಸೋಮವಾರಪೇಟೆ: ಹಾರಂಗಿ ಹಿನ್ನೀರಿನ ಯಡವಾರೆ ಪ್ರದೇಶದ ಬಳಿ ಶುಕ್ರವಾರ ಸಿಕ್ಕಿರುವ ಒಂದು ತಿಂಗಳ ಆನೆಮರಿಯ ಆರೈಕೆ ಮಾಡಲು ಅರಣ್ಯ ಇಲಾಖೆ ಹರಸಾಹಸ ನಡೆಸಿದೆ. ಅತಿ ಚಿಕ್ಕ ಪ್ರಾಯದ ಆನೆಮರಿಯನ್ನು ಸಾಕುವುದು ಕಷ್ಟವಾಗಿದ್ದು, ಮರಿಗೆ ತಾಯಿ ಹಾಲಿನಷ್ಟು ಪೌಷ್ಟಿಕ ಆಹಾರವನ್ನು ಒದಗಿಸಲು ಸಾಧ್ಯವಾಗದೆ ಪರದಾಟ ನಡೆಸುವಂತಾಗಿದೆ.

ಹಿನ್ನೀರಿನಲ್ಲಿ ತಪ್ಪಿಸಿಕೊಂಡಿರುವ ತಾಯಿ ಆನೆಯನ್ನು ಹುಡುಕುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪ್ರಯತ್ನ ಸಫಲವಾಗಿಲ್ಲ. ಶುಕ್ರವಾರ ರಾತ್ರಿಯಿಂದ ಯಡವನಾಡು ಮತ್ತು ಯಡವಾರೆ ಪ್ರದೇಶದಲ್ಲಿ ಆನೆ ಮರಿಯನ್ನು ಕರೆದುಕೊಂಡು ಹೋಗಿ ತಾಯಿ ಆನೆ ಮರಿಯ ಬಳಿ ಬರಬಹುದೆಂದು ಕಾದು ಕುಳಿತಿದ್ದರು. ಆದರೆ ಶನಿವಾರ ಬೆಳಿಗ್ಗೆಯಾದರೂ ಯಾವುದೇ ಆನೆ ಪತ್ತೆಯಾಗದೆ ಹಿಂದಿರುಗಬೇಕಾಯಿತು.

ಆನೆ ಮರಿಗೆ ಸಾಕಷ್ಟು ಪೌಷ್ಟಿಕಾಂಶವಿರುವ ಆಹಾರ ನೀಡುವ ಉದ್ದೇಶದಿಂದ ಬೇರೆ ಆನೆಯ ಹಾಲುಣಿಸಲು ಪ್ರಯತ್ನಿಸಲಾಗುತ್ತಿದೆ. ಈಚೆಗೆ ಮರಿ ಹಾಕಿರುವ ಇಲಾಖೆಯ ಸಾಕಾನೆ ವಿಜಯ್ ಈ ಅನಾಥ ಮರಿಗೆ ತನ್ನ ಮರಿಯೆಂದು ಭಾವಿಸಿ ಹಾಲುಣಿಸಬಹುದೆಂದು ಶನಿವಾರ ಬೆಳಿಗ್ಗೆ ಆನೆಕಾಡು ಪ್ರದೇಶದಲ್ಲಿರುವ ವಿಜಯ್ ಬಳಿಗೆ ಕೊಂಡೊಯ್ಯಲಾಗಿತ್ತು.

ಆದರೆ ಮಧ್ಯಾಹ್ನದ ವೇಳೆಗೆ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿತ್ತು. ಇದು ಮರಿಯನ್ನು ಕಳೆದುಕೊಂಡ ಆನೆಯೇ ಇರಬಹುದೆಂಬ ಸಂಶಯದಿಂದ ಪುನಃ ಆನೆಮರಿಯನ್ನು ಯಡವನಾಡಿಗೆ ತರುವ ಪ್ರಸಂಗ ಬಂದಿತು. ಈ ಪ್ರಯತ್ನ ಯಶಸ್ವಿಯಾದರೆ ಮರಿಯು ತನ್ನ ತಾಯಿಯನ್ನು ಸೇರಿಕೊಳ್ಳುತ್ತದೆ. ಇಲ್ಲವಾದರೆ ಆನೆಮರಿಯನ್ನು ಮೈಸೂರಿನ ಮೃಗಾಲಯಕ್ಕೆ ಒಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್ ಹಾಗೂ ಕುಶಾಲನಗರದ ವಲಯ ಅರಣ್ಯಾಧಿಕಾರಿ ಕಾರ್ಯಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.