ADVERTISEMENT

ಸೋರುತಿದೆ ತಾಲ್ಲೂಕು ಕಚೇರಿ ಕಟ್ಟಡ

ಸೊರಗುತಿದೆ ಮಿನಿ ವಿಧಾನಸೌಧದ ಚೆಲುವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 10:41 IST
Last Updated 17 ಜೂನ್ 2018, 10:41 IST

ಸೋಮವಾರಪೇಟೆ: ತಾಲ್ಲೂಕು ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಿ ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆರಂಭವಾದ ಮಿನಿ ವಿಧಾನಸೌಧ ಇಂದು ಸುಣ್ಣ ಬಣ್ಣ ಕಾಣದೇ ಪಾಳು ಬಿದ್ದ ಕಟ್ಟಡದಂತಾಗಿದೆ.

ಮಳೆಗಾಲ ಆರಂಭವಾದೊಡನೆ ಕಟ್ಟಡ ಸೋರಲಾರಂಭಿಸುತ್ತದೆ. ಕಟ್ಟಡ ಸೋರುತ್ತಿದೆ ಎಂದು ಎರಡು ವರ್ಷಗಳ ಹಿಂದೆಯೇ ಸಹಾಯಕ ನೋಂದಣಾಧಿಕಾರಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೂ ಕಟ್ಟಡದ ನಿರ್ವಹಣೆಗೆ ಯಾರೂ ಮುಂದಾಗದೆ, ಕನಿಷ್ಠ ತಾಲ್ಲೂಕು ಕಚೇರಿ ಎಂಬ ಹೆಸರಿನ ನಾಮಫಲಕವೂ ಇಲ್ಲದಿರುವುದರಿಂದ ಹೊರಗಿನಿಂದ ಬಂದ ಜನರು ಕಚೇರಿಯನ್ನು ಹುಡುಕುವಂತಾಗಿದೆ.

1997ರಲ್ಲಿ ಅಂದಿನ ಶಾಸಕರಾಗಿದ್ದ ಎ.ಎಂ. ಬೆಳ್ಳಿಯಪ್ಪರ ಅವಧಿಯಲ್ಲಿ ನಿರ್ಮಾಣವಾದ ತಹಶೀಲ್ದಾರ್‌ರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದೇ ನಾಮಕರಣ ಮಾಡಲಾಗಿದೆ. 20 ವರ್ಷಗಳ ಹಿಂದೆ ಈ ಕಟ್ಟಡವನ್ನು ಸುಮಾರು ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‌ಟಿಸಿ ವಿತರಣಾ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿವೆ.

ADVERTISEMENT

ಧಾರಾಕಾರ ಮಳೆ ಸುರಿದರೆ ಕೊಠಡಿಗಳ ಚಾವಣಿಯಲ್ಲಿ ನೀರು ಜಿನುಗುತ್ತದೆ. ಬಹುತೇಕ ವಿಭಾಗಗಳು ಕಂಪ್ಯೂಟರೀಕರಣಗೊಂಡಿದ್ದು, ಕಂಪ್ಯೂಟರ್‌ಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದೇ ಕಷ್ಟಕರ ಎಂದು ಸಿಬ್ಬಂದಿ ಹೇಳುತ್ತಾರೆ.

ಆರ್‌ಟಿಸಿ ವಿತರಣಾ ಕೇಂದ್ರದ ಚಾವಣಿಗೆ ಪ್ಲಾಸಿಕ್ ಹೊದಿಕೆಯನ್ನು ಕಟ್ಟಿ ಮಳೆ ನೀರಿನಿಂದ ರಕ್ಷಿಸಲಾಗಿದೆ. ಕೊಠಡಿಯಲ್ಲಿ ಸುಮಾರು 1,37,640 ಕಡತಗಳಿದ್ದು, ಅವುಗಳ ರಕ್ಷಣೆ ಮಾಡುವುದೇ ದೊಡ್ಡ ಸಾಹಸವಾಗಿದೆ. ಭೂಮಿ ಕೇಂದ್ರದಲ್ಲಿ ಚಾವಣಿ ಹಾಗೂ ಗೋಡೆಗಳಲ್ಲಿ ನೀರು ಸೋರುತ್ತಿದೆ.

ತಾಲ್ಲೂಕಿನ ಆರು ಹೋಬಳಿ, 298 ಗ್ರಾಮಗಳ ಜನರು ಕಂದಾಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುತ್ತಾರೆ.

‘ಸಂತೆ ದಿನವಾದ ಸೋಮವಾರ ನೂರಾರು ಮಂದಿ ಕಟ್ಟಡದೊಳಗೆ ಇರುತ್ತಾರೆ. ಕೆಲವು ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಕಟ್ಟಡ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಆದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಕಟ್ಟಡ ಸೋರುತ್ತಿರುವುದರಿಂದ ಕಡತಗಳು ನಾಶವಾಗುವ ಆತಂಕ ಎದುರಾಗಿದೆ’ ಎಂದು ಹಾನಗಲ್ಲು ಗ್ರಾಮದ ಮೋಹನ್‌ ಹೇಳಿದರು.

ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್‌, ದಿನೇಶ್ ಗುಂಡೂರಾವ್, ಎಂ.ಆರ್.ಸೀತಾರಾಂ ಅವರಿಗೂ ಮನವಿ ಸಲ್ಲಿಸಲಾಗಿದೆ. ಸೋಮವಾರಪೇಟೆಗೆ ಆಗಮಿಸಿದ್ದ ಸಂದರ್ಭ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಮಾಡಿದ್ದರು ಇದುವರೆಗೆ ಕಟ್ಟಡ ದುರಸ್ತಿಗೆ ಅನುದಾನ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

‘ಕಟ್ಟಡದ ದುರಸ್ತಿಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿ, ₹ 60 ಲಕ್ಷ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಸರ್ಕಾರದ ಅನುಮೋದನೆ ಸಿಕ್ಕ ನಂತರ ಕಟ್ಟಡದ ದುರಸ್ತಿ ಕಾರ್ಯ ಮಾಡಲಾಗುವುದು’ ಎಂದು ತಹಶೀಲ್ದಾರ್‌ ವೀರೇಂದ್ರ ಬಾಡೇಕರ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.