ಗೋಣಿಕೊಪ್ಪಲು: ಗ್ರಾಮಗಳ ಅಭಿವೃದ್ಧಿಗೆ ನೆರವಾಗುವ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಿ.ಪಂ.ಅಧ್ಯಕ್ಷ ರವಿ ಕುಶಾಲಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ಆರ್‌ಎಂಸಿ ಸಭಾಂಗಣದಲ್ಲಿ ಸೋಮವಾರ ನಡೆದ ಎನ್‌ಆರ್‌ಇಜಿ ಕಾರ್ಯಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಉದ್ಯೋಗ ಖಾತ್ರಿ ಯೋಜನೆಯ ಹಣದಲ್ಲಿ ತಾಲ್ಲೂಕಿನ 36 ಗ್ರಾ.ಪಂ.ಗಳಿಂದ ಒಟ್ಟು ರೂ.323.554ಲಕ್ಷ ಬಾಕಿ ಉಳಿದಿದೆ. ಮಾರ್ಚ್ ಒಳಗೆ ಬಳಕೆಯಾಗದಿದ್ದರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಉದ್ಯೋಗಖಾತ್ರಿಯಲ್ಲಿ ಕೇವಲ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ, ಜಲಾನಯನ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸದಸ್ಯ ಕೊಡಂದೇರ ಗಣಪತಿ ತಾಲ್ಲೂಕಿನ ಜನತೆಗೆ ರಸ್ತೆ, ಚರಂಡಿ ಮುಖ್ಯವೇ ಹೊರತು ಅರಣ್ಯವಲ್ಲ. ರಸ್ತೆ ಕಾಮಗಾರಿಗೆ ಈಗಾಗಲೇ ಮೀಸಲಿರುವ ಶೇ.20ರಷ್ಟು ಅನುದಾನದ ಜತೆಗೆ ಇನ್ನೂ ಶೇ.10ರಷ್ಟು ಹಣ ಸೇರಿಸಿ ಕಾಮಗಾರಿ ನಡೆಸಬೇಕು ಎಂದು ಹೇಳಿದರು.
ದೇವರಪುರ ಗ್ರಾ.ಪಂ ನಲ್ಲಿ ನೈರ್ಮಲ್ಯಕ್ಕೆ ಮೀಸಲಾಗಿದ್ದ ಹಣ ದುರ್ಬಳಕೆಯಾಗಿದೆ. ಅಲ್ಲಿನ ದೇವಸ್ಥಾನ ಅಭಿವೃದ್ಧಿ ಕಾಮಗಾರಿಯನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿದ್ದರೂ ಸ್ಥಳೀಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಜಿ.ಪಂ.ಸದಸ್ಯ ಬಿ.ಎನ್.ಪೃಥ್ಯೂ, ತಾ.ಪಂ.ಸದಸ್ಯ ಟಾಟು ಮೊಣ್ಣಪ್ಪ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿ ಕುಶಾಲಪ್ಪ ತಮಗೆ ಸಂಪೂರ್ಣ ಅಧಿಕಾರವಿದೆ. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ತಂದು ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ. ಕ್ರಿಯಾಯೋಜನೆ ತಯಾರಿಸುವಾಗ ತಾವೂ ಸೇರಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಸಲಹೆ ಮಾಡಿದರು.
ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಮೀಸಲಿರುವ ಅನುದಾನ ಸರಿಯಾಗಿ ಬಳಕೆಯಾಗದಿದ್ದರೆ ಅದನ್ನು ಸಾಮಾನ್ಯ ವರ್ಗಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಜಿ.ಪಂ.ಸದಸ್ಯೆ ಶಂಕುತಲಾ ರವೀಂದ್ರ ಹೇಳಿದಾಗ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ, ತಾ.ಪಂ.ಸದಸ್ಯೆ ಜೆ.ಕೆ.ಮುತ್ತಮ್ಮ, ಟಾಟು ಮೊಣ್ಣಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪರಿಶಿಷ್ಟ ಜನಾಂಗಕ್ಕೆ ಮೀಸಲಾದ ಹಣವನ್ನು ಅವರ ಅಭಿವೃದ್ಧಿಗೆ ಬಳಸಬೇಕೇ ಹೊರತು ದುರ್ಬಳಕೆಯಾಗಬಾರದು ಎಂದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು. ಹಣದ ಕೊರತೆ ಕಂಡು ಬಂದರೆ ಜಿ.ಪಂ. ಮೂಲಕ ಅನುದಾನ ಪಡೆದುಕೊಂಡು ನೀರಿನ ಸಮಸ್ಯೆ ನೀಗಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕಡತಗಳನ್ನು ತಯಾರಿಸಿ ಕಚೇರಿಗೆ ಕಳಿಸಿದರೆ ಪ್ರತಿ ಮೇಜಿನಲ್ಲಿ ಅಧಿಕಾರಿಗಳ ಕೈ ಬಿಸಿಮಾಡಬೇಕಾಗಿದೆ. ಇಲ್ಲದಿದ್ದರೆ ಕಡತ ಮುಂದಕ್ಕೆ ಹೋಗುವುದಿಲ್ಲ ಎಂದು ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಚೆಪ್ಪುಡಿರ ಕರುಣ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿಕುಶಾಲಪ್ಪ ಇಂತಹ ದೂರುಗಳ ಬಗ್ಗೆ ಗುಟ್ಟಾಗಿ ಪತ್ರದ ಮೂಲಕ ತಮ್ಮ ಗಮನಕ್ಕೆ ತಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ನಡೆಯುವ ತರಬೇತಿ ಕಾರ್ಯಗಳು ಪೂರ್ಣಗೊಳ್ಳುತ್ತಿಲ್ಲ. ಕೇವಲ ಹಣ ದುರ್ಬಳಕೆಯಾಗುತ್ತಿದೆ ಎಂದು ಅರುವತ್ತೊಕ್ಕಲು ಗ್ರಾ.ಪಂ.ಸದಸ್ಯ ಪಿಲಿಫೋಸ್ ಮ್ಯಾಥ್ಯೂ ದೂರಿದರು. ಬೇಟೋಳಿ, ಅರುವತ್ತೊಕ್ಕಲು ಹಾಗೂ ನಿಟ್ಟೂರು ಗ್ರಾ.ಪಂ.ಗಳಿಗೆ ಒಬ್ಬರೇ ಪಿಡಿಒ ಇದ್ದು ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಬೇಟೋಳಿ ಗ್ರಾ.ಪಂ.ಅಧ್ಯಕ್ಷೆ ಬಿ.ಜಿ.ಅನಿತಾ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ರವಿ ಕುಶಾಲಪ್ಪ ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಜಿ.ಪಂ. ಉಪಾಧ್ಯಕ್ಷೆ ಕಾವೇರಿ, ತಾ.ಪಂ.ಅಧ್ಯಕ್ಷ ಎಚ್.ಕೆ.ದಿನೇಶ್, ಉಪಾಧ್ಯಕ್ಷೆ ಧರಣಿ ಕಟ್ಟಿ, ಜಿ.ಪಂ. ಉಪಕಾರ್ಯದರ್ಶಿ ಬಸವರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರೆಡ್ಡಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.