ನಾಪೋಕ್ಲು: ಇಲ್ಲಿಗೆ ಸಮೀಪದ ಚೆರಿಯಪರಂಬುವಿನಲ್ಲಿ ವಿಶಾಲ ಕ್ರೀಡಾಂಗಣ, ದರ್ಗಾ, ಸರ್ಕಾರಿ ಪ್ರಾಥಮಿಕ ಶಾಲೆ ಇವೆ. ಈ ಗ್ರಾಮದ ರಸ್ತೆ ಅವ್ಯವಸ್ಥೆ ಸಂಚಾರ ಸಂಚಕಾರ ತರುವಂತಿದೆ. ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರು. ವಾಹನ ಸಂಚಾರ ದುಸ್ತರವಾಗಿದೆ.
ಮಳೆಗಾಲದಲ್ಲಿ ಇಲ್ಲಿನ ಜಲಾವೃತ ಮಾರ್ಗದಲ್ಲಿ ಸಂಚರಿಸಲು ಹರಸಾಹಸಪಡಬೇಕಾದ ಸ್ಥಿತಿ ಇದೆ. ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಪಾಳುಬಿದ್ದ ಗದ್ದೆ ಬಯಲಿದ್ದು, ಮಳೆಗಾಲದಲ್ಲಿ ಸಂಚಾರ ಅವ್ಯವಸ್ಥೆ ಹೇಳತೀರದು.
ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಕ್ಕುಂದ ಕಾಡಿಗೆ ತೆರಳುವ ರಸ್ತೆಯ ಸ್ವಲ್ಪ ಭಾಗಕ್ಕೆ ಜಲ್ಲಿಕಲ್ಲು ಹಾಕಲಾಗಿದೆ. ಡಾಂಬರೀಕರಣವಾಗಿಲ್ಲ. ಶಾಲೆಯಿಂದ ಸ್ವಲ್ಪ ಮುಂದೆ ತೆರಳಿದರೆ ಮಣ್ಣು ರಸ್ತೆ ಇದ್ದು ರಸ್ತೆ ಬದಿಯ ಮನೆಯೊಂದರ ತಡೆಗೋಡೆ ಕುಸಿದು ರಸ್ತೆ ಅಂಚಿಗೆ ಮಣ್ಣಿನ ರಾಶಿ ಹರಡಿದೆ.
ಇದರಿಂದಾಗಿ ನಿತ್ಯ ಈ ರಸ್ತೆಯಲ್ಲಿ ಒಡಾಡುವ ಜನತೆ ನರಕಯಾತನೆ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿ ವಾಹನಗಳು ಹರೋಹರ ಎನ್ನುವಂತಾಗಿದೆ. ಆಟೊ ಚಾಲಕರು ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ!
ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ಸೇರಿ ಸುಮಾರು 250 ಮನೆಗಳಿವೆ.
ಪಾಳು ಬಿದ್ದ ಗದ್ದೆಯ ಬದಿಯಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ಸರಾಗವಾಗಿ ನೀರು ಹರಿಯಲು ಮೋರಿ ನಿರ್ಮಿಸುವ ಅಗತ್ಯವಿದೆ. ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಅಳಲು.
ರಸ್ತೆ ದುರಸ್ತಿಗೆ ಆಗ್ರಹಿಸಿ ಈಚೆಗಷ್ಟೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಪರಿಣಾಮ ಮಾತ್ರ ಶೂನ್ಯ.
ಸದ್ಯದಲ್ಲಿಯೇ ಚೆರಿಯಪರಂಬು ಉರುಸ್ ನಡೆಯಲಿದೆ. ಅಷ್ಟರೊಳಗೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಒತ್ತಾಯ.
ರಸ್ತೆ ದುರಸ್ತಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಎರಡು ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಸದ್ಯದಲ್ಲಿಯೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ನೆರವಂಡ ಉಮೇಶ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.