ADVERTISEMENT

ಹಲ್ಲೆ: ಕಾಲೇಜು ವಿದ್ಯಾರ್ಥಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:17 IST
Last Updated 12 ಮಾರ್ಚ್ 2014, 6:17 IST

ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆ ವೀಕ್ಷಿಸಿ ಮನೆಗೆ ಹಿಂದುರುಗುತ್ತಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.

ಇಲ್ಲಿನ ಜನತಾ ಕಾಲೊನಿ ನಿವಾಸಿ ವಾಸು ಅವರ ಪುತ್ರ, ಸ್ಥಳೀಯ ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಪವನ್‌ಕುಮಾರ್ ಗಾಯಗೊಂಡವ. ಈತನ ಮೇಲೆ ಅದೇ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಕ್ಷತ್ ಮತ್ತು ಸಂಗಡಿಗರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಪವನ್‌ಕುಮಾರ್‌ನ ಕಿವಿ ಭಾಗಕ್ಕೆ ಗಾಯವಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾಲೇಜಿನಲ್ಲಿ ಸೀನಿಯರ್ ಹಾಗೂ ಜೂನಿಯರ್ ವಿದ್ಯಾರ್ಥಿಗಳ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದು, ಇದನ್ನು ತಹಬದಿಗೆ ತರಲು ಕಾಲೇಜು ಆಡಳಿತ ಮತ್ತು ಪ್ರಾಂಶುಪಾಲರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಲವು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.