ADVERTISEMENT

ಹಾಳಾದ ರಸ್ತೆ: ಜನರಿಗೆ ಗೋಳು

ಮಡಿಕೇರಿ: ಒಳಚರಂಡಿ ಕಾಮಗಾರಿಯ ಪರಿಣಾಮ

​ಪ್ರಜಾವಾಣಿ ವಾರ್ತೆ
Published 21 ಮೇ 2018, 13:14 IST
Last Updated 21 ಮೇ 2018, 13:14 IST
ಮಡಿಕೇರಿ ರಸ್ತೆಯ ಸ್ಥಿತಿ ಹೀಗಿದೆ
ಮಡಿಕೇರಿ ರಸ್ತೆಯ ಸ್ಥಿತಿ ಹೀಗಿದೆ   

ಮಡಿಕೇರಿ: ಒಂದೆಡೆ ಒಳಚರಂಡಿ ಕಾಮಗಾರಿಗೆ ರಸ್ತೆಗಳ ಸ್ಥಿತಿ ಅಯೋಮಯವಾದರೆ; ಮತ್ತೊಂದೆಡೆ ವಾರದಿಂದ ಈಚೆಗೆ ಸುರಿದ ಭಾರಿ ಮಳೆಗೆ ‘ಮಂಜಿನ ನಗರಿ’ ರಸ್ತೆಗಳೆಲ್ಲವೂ ಹಾಳಾಗಿವೆ.

ಒಂದು ಹಂತದಲ್ಲಿ ನಗರದ ರಸ್ತೆಗಳು ಸುಧಾರಣೆ ಕಂಡಿದ್ದವು. ಆದರೆ, ಕಳೆದ ವರ್ಷ ಏಕಾಏಕಿ ಯುಜಿಡಿ ಕಾಮಗಾರಿ ಆರಂಭಿಸಿದ ಪರಿಣಾಮ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ವಾಹನಗಳ ಕಥೆ ಇರಲಿ, ರಸ್ತೆ ಬದಿಯ ಫುಟ್‌ಪಾತ್‌ನಲ್ಲೂ ಸಂಚರಿಸಲು ಆಗದಿರುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಮುಖ್ಯರಸ್ತೆಗಳು ಸೇರಿದಂತೆ ಕೊಹಿನೂರು ರಸ್ತೆ, ಗೌಳಿಬೀದಿ ರಸ್ತೆ, ಕಾನ್ವೆಂಟ್ ರಸ್ತೆ, ಪೆನ್ಷನ್ ಲೈನ್, ವಿದ್ಯಾನಗರ, ಮಲ್ಲಿಕಾರ್ಜುನ ನಗರ, ಮಂಗಳಾದೇವಿ ನಗರ, ಹೊಸ ಬಡವಾಣೆಯ ಬಹುತೇಕ ಅಡ್ಡರಸ್ತೆಗಳ ಸ್ಥಿತಿ ಹೇಳತೀರದು.

ADVERTISEMENT

ಸಾರ್ವಜನಿಕರ ಆಗ್ರಹದ ಮೇರೆಗೆ ಹೊಸ ಬಡಾವಣೆಯಲ್ಲಿ ರಸ್ತೆಗೆ ತೇಪೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಆದರೂ ರಸ್ತೆಯ ಅಂಚಿನ ಗುಂಡಿಗಳನ್ನು ಮಾತ್ರ ದುರಸ್ತಿಪಡಿಸಲಾಗುತ್ತಿದೆ. ಯುಜಿಡಿಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವಿಳಂಬವಾಗಿ ನಡೆಯುತ್ತಿದೆ.

ಇನ್ನು, ಮಳೆಗೆ ರಸ್ತೆ ತುಂಬೆಲ್ಲಾ ಕಲ್ಲುಗಳು ಎದ್ದು ನಿಂತಿವೆ. ದೂಳು ಸಾರ್ವಜನಿಕರ ಹೈರಾಣ ಮಾಡಿದೆ. ಬೈಕ್ ಸವಾರರಿಗೆ ಜಾರಿ ಬೀಳುವ ಭಯ ತಪ್ಪಿದ್ದಲ್ಲ. ಸಾಕಷ್ಟು ಬಾರಿ ಸವಾರರ ಪ್ರಾಣಕ್ಕೆ ಸಂಚಕಾರ ತರುವಂತಹ ಘಟನೆಗಳು ನಡೆದಿವೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನ ಸವಾರರು ಪ್ರತಿದಿನ ಭಯದಿಂದ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

‘ಚರಂಡಿ ತೆಗೆದು ಸಮರ್ಪಕವಾಗಿ ಮಣ್ಣು ಮುಚ್ಚದಿರುವ ಪರಿಣಾಮ, ಮಳೆಗೆ ಮಣ್ಣು ದಿನೇ ದಿನೇ ಕುಸಿಯುತ್ತಿದೆ. ರಾತ್ರಿ ವೇಳೆ ಬೈಕ್‌ ಸವಾರರು ಚರಂಡಿ ಪಾಲಾಗುವ ಸ್ಥಿತಿಯಿದೆ’ ಎಂದು ಗೌಳಿಬೀದಿಯ ಚಂದನ್ ರಾವ್ ಆತಂಕ ವ್ಯಕ್ತಪಡಿಸುತ್ತಾರೆ.

ಮಳೆ ಆರಂಭವಾದರೂ ಚರಂಡಿ, ತೋಡುಗಳನ್ನು ಸ್ವಚ್ಛಗೊಳಿಸುವ ನಗರಸಭೆ ಕೆಲಸ ಇನ್ನೂ ಆರಂಭವಾಗಿಲ್ಲ. ಇದರಿಂದ ಅಲ್ಲಲ್ಲಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಣೆಗೊಂಡು ಮಳೆ ನೀರು ರಸ್ತೆಗೆ ಬರುತ್ತಿದೆ. ಈ ಬಗ್ಗೆಯೂ ನಗರಸಭೆ ಎಚ್ಚೆತ್ತುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರವಾಸಿಗರಿಗೆ ಕಿರಿಕಿರಿ: ನಿತ್ಯ ಮಡಿಕೇರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯ ಪ್ರವಾಸಿಗರಿಂದ ನಗರವು ತುಂಬಿರುತ್ತದೆ. ರಸ್ತೆಗಳ ಈ ಸ್ಥಿತಿ ಅವರಿಗೆ ಕಿರಿಕಿರಿ ತರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.