ADVERTISEMENT

ಹುಲಿ ದಾಳಿ: ಹಸು ಸಾವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 10:11 IST
Last Updated 3 ಜನವರಿ 2014, 10:11 IST

ಗೋಣಿಕೊಪ್ಪಲು: ತಿತಿಮತಿ ಸಮೀಪದ ಭದ್ರಗೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಹಸುವೊಂದರ ಮೇಲೆ ಹುಲಿ ದಾಳಿ ಮಾಡಿದ ಘಟನೆ ನಡೆದಿದೆ.
ಗ್ರಾಮದ ನೆಲ್ಲಿಕಾಡು ಕಾಫಿ ಬೆಳೆಗಾರರಾದ ಆದೇಂಗಡ ಭರತ್ ಅವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ ವೇಳೆಯಲ್ಲಿ ದಾಳಿ ನಡೆಸಿದ ಹುಲಿ ಹಸುವೊಂದನ್ನು ಕೊಂದು ಹಾಕಿದೆ. ಒಂದೂವರೆ ತಿಂಗಳ ಹಿಂದಷ್ಟೆ ಕರುವಿಗೆ ಜನ್ಮ ನೀಡಿರುವುದರಿಂದ ಕರು ತಬ್ಬಲಿಯಾಗಿದೆ. 

ಭರತ್ ಅವರ ಮನೆಯಿಂದ 20 ಮೀಟರ್ ದೂರವಿರುವ ಕೊಟ್ಟಿಗೆಗೆ ಹುಲಿ ದಾಳಿ ನಡೆಸಿದೆ. ಕೊಟ್ಟಿಗೆಯಲ್ಲಿ 4 ಹಸು ಮತ್ತು ಒಂದು ಕರು ಇದ್ದವು. ಇದರಲ್ಲಿ ಒಂದು ಹಸುವನ್ನು ಕೊಂದು ಹಾಕಿರುವ ಹುಲಿಯು ಅದನ್ನು 40 ಮೀಟರ್ ಎಳೆದೊಯ್ದಿದೆ. ಅದೇ ಮಾರ್ಗದಲ್ಲಿ ನೀರು ಹರಿಯುವ ತೋಡು ಇದ್ದರೂ ನೀರಿನ ಮೂಲಕ ಅದನ್ನು ಎಳೆದೊಯ್ದಿರುವುದು ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇವರ ಮನೆಯಿಂದ 400 ಮೀಟರ್ ದೂರದಲ್ಲಿ ಮಾವುಕಲ್ ಅರಣ್ಯ ಪ್ರದೇಶದಿಂದ ಹುಲಿ ಬಂದು ದಾಳಿ ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಸುವಿನ ಕುತ್ತಿಗೆ ಭಾಗದಲ್ಲಿ ಘಾಸಿಗೊಳಿಸಿ ಕೊಂದು ಹಾಕಿದೆ. 10 ಲೀಟರ್ ಹಾಲು ನೀಡುತ್ತಿದ್ದ ಹಸುವಿನ ಸಾವಿನಿಂದಾಗಿ ₨ 22 ಸಾವಿರ ನಷ್ಟವಾಗಿದೆ ಎಂದು ಹಸುವಿನ ಮಾಲೀಕ ಭರತ್ ತಿಳಿಸಿದ್ದಾರೆ.

ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಮತ್ತು ತಂಡ ಪರಿಶೀಲನೆ ನಡೆಸಿತು. ನಂತರ ತಿತಿಮತಿ ಪಶು ವೈದ್ಯಾಧಿಕಾರಿ ಸತೀಶ್ ಅವರು ಹಸುವಿನ ಮರಣೋತ್ತರ ಪರಿಕ್ಷೆ ನಡೆಸಿದರು.

ಕರಡಿಗೋಡು: ಹಸು ಬಲಿ
ಸಿದ್ದಾಪುರ:
ಸಮೀಪದ ಕರಡಿಗೋಡು ಗ್ರಾಮದಲ್ಲಿ ಹುಲಿಯೊಂದು ಹಸುವನ್ನು  ಕೊಂದು ಹಾಕಿದ ಘಟನೆ ಸೋಮವಾರ ನಡೆದಿದೆ. ಕರಡಿಗೋಡು ಗ್ರಾಮದ ಅಲವಿ ಎಂಬುವವರು ತಮ್ಮ ಹಸುವನ್ನು ಸೋಮವಾರ ಕರಡಿಗೋಡು ಗ್ರಾಮಕ್ಕೆ ಹೊಂದಿಕೊಂಡಿರುವ ಅವರೆಗುಂದ ಅರಣ್ಯದ ಅಂಚಿನಲ್ಲಿ ಮೇಯಲು ಬಿಟ್ಟ ಸಂದರ್ಭ ಈ ಘಟನೆ ನಡೆದಿದೆ.

ಅವರೆಗುಂದ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹುಲಿ ಜನವಾಸದೆಡೆಗೆ ಬರಲಾರಂಭಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಕರಡಿಗೋಡು, ಅವರೆಗುಂದ ಗ್ರಾಮಗಳಿಗೆ ವಾಹನ ಸಂಚಾರ ವಿರಳವಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಾಗೂ ಕಾರ್ಮಿಕರು ನಡೆದುಕೊಂಡೇ ಸಾಗಬೇಕಿದೆ. ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದು ಆತಂಕದಿಂದ ಮುಕ್ತಿ ದೊರಕಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT