ADVERTISEMENT

ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:30 IST
Last Updated 17 ಜುಲೈ 2012, 8:30 IST

ಮಡಿಕೇರಿ: ಕೊಡಗು ಜಿಲ್ಲೆಯ ಹಲವು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಎನ್ನುವ ಕೂಗು ಒಂದೆಡೆ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಇನ್ನುಳಿದ ಕೆಲವು ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಹೆಚ್ಚಾಗಿದೆ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.

ಈ ಅಸಮತೋಲನವನ್ನು ಸರಿಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಬಸವರಾಜು ಕ್ರಮಕೈಗೊಂಡಿದ್ದು, ಹೆಚ್ಚುವರಿ ಶಿಕ್ಷಕರ ಹಾಗೂ ಅವರು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಸದ್ಯದಲ್ಲಿಯೇ ಈ ಶಿಕ್ಷಕರನ್ನು ಅವಶ್ಯಕತೆ ಇರುವ ಶಾಲೆಗಳಿಗೆ ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಈ ಕ್ರಮದಿಂದ ಶಿಕ್ಷಕರು ಆತಂಕಗೊಳ್ಳಬೇಕಾಗಿಲ್ಲ. ಶಿಕ್ಷಕರ ಕೆಲಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅವರ ಸೇವೆ ಮುಂದುವರಿಯುತ್ತದೆ. ಇದರೊಟ್ಟಿಗೆ ಕೊರತೆ ಇರುವ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಪತ್ರಿಕೆಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಜಿಲ್ಲೆಯ ಕೆಲವೊಂದು ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಇರುವ ಶಿಕ್ಷಕರ ಸಂಖ್ಯೆ 78ರಷ್ಟಿದೆ. ತಾಲ್ಲೂಕುವಾರು ತೆಗೆದುಕೊಂಡರೆ ಸೋಮವಾರ ಪೇಟೆ ಶಾಲೆಗಳಲ್ಲಿ ಅತಿ ಹೆಚ್ಚು 40 ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಇನ್ನುಳಿದಂತೆ ಮಡಿಕೇರಿ ತಾಲ್ಲೂಕಿನ ಶಾಲೆಗಳಲ್ಲಿ 29 ಹಾಗೂ ವಿರಾಜಪೇಟೆ ತಾಲ್ಲೂಕಿನ ಶಾಲೆಗಳಲ್ಲಿ 9 ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.

ಮಡಿಕೇರಿ ತಾಲ್ಲೂಕಿನ ಜೋಡುಪಾಲ (1), ತಾಳತ್ತಮನೆ (1), ಕೆ.ಬಾಡಗ (1), ಮಕ್ಕಂದೂರು (2), ತೊಂಬತ್ತುಮನೆ (1), ಹೊದವಾಡ (3), ಚೆರಿಯಪರಂಬು (1), ಚಪ್ಪೆಂಡಡಿ (1), ಭಾಗಮಂಡಲ (1), ಅಯ್ಯಂಗೇರಿ (1), ಕಂಡಕೆರೆ (1), ಗುಯ್ಯ (3), ಚೆಟ್ಟಳ್ಳಿ (2), ಸಿದ್ದಾಪುರ (1), ಯು.ಚೆಂಬು (1), ಬೆಟ್ಟಗೇರಿ (3), ಕನ್ನಡ ಪೆರಾಜೆ (1), ಕೋಟೆ ಪೆರಾಜೆ (1), ಬಲಮುರಿ (1) ಹಾಗೂ ಕೆಡಂಗ (2) ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ. (ಆವರಣದಲ್ಲಿ ನೀಡಲಾಗಿರುವುದು ಹೆಚ್ಚುವರಿ ಶಿಕ್ಷಕರ ಸಂಖ್ಯೆ). 

ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ (1), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಮ್ಮತ್ತಿ, ಒಂಟಿಅಂಗಡಿ (1), ದೇವಣಗೇರಿ (1), ಕಾನೂರು (1), ಬಾಣಂಗಾಲ (1), ಆರ್ಜಿ (1), ಕುಟ್ಟ (1), ಚೆನ್ನಂಗೊಲ್ಲಿ (1), ಪೊನ್ನಂಪೇಟೆ (1) ಪ್ರಾಥಮಿಕಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ. 

 ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ (1), ಬೇಳೂರು ರಸ್ತೆ (2), ಗೌಡಳ್ಳಿ (1),  ಹೆಬ್ಬಾಲೆ (2), ಕೊಡಗರಹಳ್ಳಿ (1), ಕೊಡ್ಲಿಪೇಟೆ (2), ಕುಶಾಲನಗರ (2), ಮಾದಾಪುರ(1), ನೇರುಗಳಲೆ (1), ಶನಿವಾರ ಸಂತೆ (1), ಅಂಕನಳ್ಳಿ (1), ಅತ್ತೂರು ನಲ್ಲೂರು (1), ಬ್ಯಾಡಗೊಟ್ಟಿ (1), ಬಳಗುಂದ (1), ಬೇಳೂರು (1), ಬೆಂಬಳೂರು (1), ಚೌಡ್ಲು (1), ದೊಡ್ಡಮಳ್ತೆ (1), ದುಂಡಳ್ಳಿ (1), ಗರಗಂದೂರು (1), ಗೆಜ್ಜೆಹಣಕೋಡು (1), ಗೋಪಾಲಪುರ (1), ಹಂಡ್ಲಿ (1), ಹೊಸತೋಟ (1), ಹುಲಗುಂದ (1), ಕಾಜೂರು (1), ಕಣಿವೆ (1), ಕೂಡುಮಂಗಳೂರು (1), ಮದಲಾಪುರ (1), ಮಾದಾಪಟ್ನ, ಮತ್ತಿಕಾಡು (1), ಮುಳ್ಳುಸೋಗೆ (1), 7ನೇ ಹೊಸಕೋಟೆ (1), ತೊರೆನೂರು (1), ವಿಜಯನಗರ (1) ಹಾಗೂ ವಾಲ್ನೂರು ತ್ಯಾಗತ್ತೂರು (1) ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ.

ಈ ಶಿಕ್ಷಕರನ್ನು ಆಯಾ ತಾಲ್ಲೂಕುಗಳ ಇತರೆ ಶಾಲೆಗಳಿಗೆ (ಶಿಕ್ಷಕರ ಕೊರತೆ ಇರುವ ಶಾಲೆಗಳು) ವರ್ಗಾಯಿಸಲಾಗುವುದು ಎಂದು ಬಸವರಾಜು ತಿಳಿಸಿದರು. 

 ಶಿಕ್ಷಕರ ಪುನರ್-ನಿಯುಕ್ತಿಗೊಳಿಸುವ ಕ್ರಮವನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಪ್ರತಿ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಶಿಕ್ಷಕರ ಸಂಖ್ಯೆ, ಅವರ ಹೆಸರು, ಅವರ ಜನ್ಮದಿನಾಂಕ ಹಾಗೂ ಶಾಲೆಗೆ ಅವರು ಸೇರಿದ ದಿನಾಂಕವನ್ನು  ಸಹ ವೆಬ್‌ಸೈಟ್‌ನಲ್ಲಿ www.kodagu.nic.in/zpdepts/education.htmಪ್ರಕಟಿಸಲಾಗಿದೆ.

ಈಗ ಪ್ರಕಟಿಸಲಾಗಿರುವ ಈ ಮಾಹಿತಿಯಲ್ಲಿ ಏನಾದರೂ ಏರುಪೇರಾಗಿದ್ದರೆ ಶಿಕ್ಷಕ ರು ತಮ್ಮ ಬ್ಲಾಕಿನ ಬಿಇಒ ಅವರ ಗಮನಕ್ಕೆ ಜುಲೈ 23ರೊಳಗೆ ತರಬಹುದು ಎಂದು ಅವರು ಹೇಳಿದರು.

ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸಿದಂತೆ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಸಹ ತಯಾರಿಸಲಾಗಿದೆ. ಇದನ್ನು ಕೂಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ನುಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.